ಬೆಂಗಳೂರು: ನಗರದ ದಕ್ಷಿಣ ಭಾಗದಲ್ಲಿ ಪ್ರಾಯೋಗಿಕ ಹಂತದಲ್ಲಿ ಜಾರಿಗೆ ತಂದಿದ್ದ 'ಹೋಮ್ ಡೆಲಿವರಿ ಸೇವೆ' (ಹೋಮ್ ಲೈನ್') ಬೆಂಗಳೂರು ನಗರದಾದ್ಯಂತ 198 ವಾರ್ಡ್ಗಳಿಗೆ ವಿಸ್ತರಣೆ ಮಾಡಲಾಗಿದೆ.
ಸಾರ್ವಜನಿಕರು ಸಹಾಯವಾಣಿ (080 61914960)ಗೆ ನೇರವಾಗಿ ಕರೆ ಮಾಡಿ ತಮ್ಮ ಅಗತ್ಯ ಬಳಕೆಯ ವಸ್ತುಗಳ ಪಟ್ಟಿಯನ್ನು ತಿಳಿಸಿದಲ್ಲಿ ಡೆಲಿವರಿ ಸಹಾಯಕರು ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುತ್ತಾರೆ.
ಇದಲ್ಲದೆ ವಾಟ್ಸ್ಆ್ಯಪ್ ಮೂಲಕವೂ ಹಾಯ್ (Hi) ಎಂದು ಸಂದೇಶ ಕಳುಹಿಸುವ ಮೂಲಕ ಈ ಸೇವೆಯನ್ನು ಬಳಸಿಕೊಳ್ಳಬಹುದು. ಸಂದೇಶ ಕಳುಹಿಸಿದ ಬಳಿಕ ಕೆಲವು ಸೂಚನೆಗಳನ್ನು ಒಳಗೊಂಡ ಕನ್ನಡ ಧ್ವನಿಮುದ್ರಿತ ಸಂದೇಶವೊಂದು ಗ್ರಾಹಕರ ಮೊಬೈಲ್ಗೆ ತಲುಪುತ್ತದೆ. ನಂತರ ಗ್ರಾಹಕರು ತಮ್ಮ ಅಗತ್ಯ ವಸ್ತುಗಳ ಪಟ್ಟಿಯನ್ನು ಟೈಪ್ ಮಾಡಿ ಅಥವಾ ಒಂದು ಹಾಳೆಯಲ್ಲಿ ಅದನ್ನು ಬರೆದು ಅದರ ಫೋಟೋ ತೆಗೆದು ಸಹಾಯವಾಣಿ ಸಂಖ್ಯೆಗೆ ಕಳುಹಿಸಬೇಕು. ಔಷಧ ಸಾಮಗ್ರಿಗಳ ಅಗತ್ಯವಿದ್ದಲ್ಲಿ ವೈದ್ಯರಿಂದ ಪಡೆದ ಔಷಧಿ ಚೀಟಿಯನ್ನು ಲಗತ್ತಿಸತಕ್ಕದ್ದು.
ಈ ಸೇವೆಯ ಮೂಲಕ ಬೆಂಗಳೂರಿನ ನಾಗರಿಕರು ತಮ್ಮ ಅಗತ್ಯ ದಿನ ಬಳಕೆಯ ವಸ್ತುಗಳನ್ನು ನೇರವಾಗಿ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ನೀವು ಆರ್ಡರ್ ಮಾಡಿದ ವಸ್ತುಗಳ ದರದ ಜೊತೆಗೆ ಹೆಚ್ಚುವರಿಯಾಗಿ ಸೇವಾ ಶುಲ್ಕ 10 ರೂ.ಗಳನ್ನು ನೀಡಬೇಕಿದೆ. ಲಾಕ್ಡೌನ್ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಡೆಲಿವರಿ ಸೇವೆ ಆರಂಭಿಸಿದ್ದು, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಸಾಮಾನ್ಯ ಜನತೆ ಅಗತ್ಯ ವಸ್ತುಗಳನ್ನು ಪಡೆಯಲು ಹೊರಗಡೆ ಬರುವುದನ್ನು ತಪ್ಪಿಸಲು ಈ ಸೇವೆಯನ್ನು ಮೊದಲು ಪ್ರಾಯೋಗಿಕ ಹಂತದಲ್ಲಿ ಜಾರಿ ಮಾಡಲಾಗಿತ್ತು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಆರಂಭಿಸಲಾಗಿತ್ತು. ಇದುವರೆಗೆ 11,500ಕ್ಕಿಂತ ಹೆಚ್ಚಿನ ನಾಗರಿಕರು ಈ ಸೇವೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದರಿಂದ ಈ ಸೇವೆಯನ್ನು ಬೆಂಗಳೂರು ನಗರದಾದ್ಯಂತ ಸಂಪೂರ್ಣ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗುತ್ತಿದೆ.
ಸುಮಾರು 16,000 ದಿನಸಿ, ತರಕಾರಿ ಮತ್ತು ಔಷಧಿ ಅಂಗಡಿಗಳನ್ನು ಜಿಯೋ ಮ್ಯಾಪಿಂಗ್ ಮೂಲಕ ಈ ಸೇವೆಯ ವ್ಯಾಪ್ತಿಯಲ್ಲಿ ಸೇರಿಸಲಾಗಿದ್ದು, ಸಾರ್ವಜನಿಕರು ತಮಗೆ ಅಗತ್ಯವಿರುವ ವಸ್ತುಗಳ ಆರ್ಡರ್ ನೀಡಿದಲ್ಲಿ ಅದು ಸಮೀಪದ ದಿನಸಿ, ತರಕಾರಿ ಮತ್ತು ಔಷಧಿ ಅಂಗಡಿಗೆ ತಲುಪುವ ನಿಟ್ಟಿನಲ್ಲಿ ಈ ಸೇವೆಯನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ. ಇದರಿಂದ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಪಡೆಯಲು ಅನುಕೂಲವಾಗುವುದಷ್ಟೇ ಅಲ್ಲದೆ ಹತ್ತಿರದ ದಿನಸಿ, ತರಕಾರಿ, ಔಷಧ ಅಂಗಡಿ ವರ್ತಕರಿಗೂ ಆದಾಯ ಸಿಗಲಿದೆ ಎನ್ನುವುದು ಸರ್ಕಾರದ ಚಿಂತನೆಯಾಗಿದೆ.
ಫಾರ್ಮ್ ಈಜಿ, ಸ್ಪಾಟ್ ಕೇರ್ ಮತ್ತು ಮೆಡ್ ಲೈಫ್ ಸಂಸ್ಥೆಗಳು ಔಷಧಿ ಸಾಮಗ್ರಿಗಳನ್ನು ಹೋಮ್ ಡೆಲಿವರಿ ಸೇವೆ ಮುಖಾಂತರ ತಲುಪಿಸಲು ಸಹಾಯ ಮಾಡುತ್ತಿವೆ. ಅಪಾರ್ಟ್ಮೆಂಟ್ ಮತ್ತು ಮನೆಗಳಿಗೆ ಬಿಗ್ ಬಜಾರ್, ಸ್ಟೋರ್ ಸೆ, ಶಾಪ್ ಜಿ, ಕ್ಲೋವರ್ ವೆಂಚರ್ಸ್, ನಿಂಜಾ ಕಾರ್ಟ್ ಸಂಸ್ಥೆಗಳು ಆಹಾರ, ದಿನ ಬಳಕೆಯ ಸಾಮಗ್ರಿಗಳನ್ನು ತಲುಪಿಸಲು ಸಹಾಯ ಒದಗಿಸುತ್ತಿವೆ.
'ಲೆಟ್ಸ್ ಬಿ ದಿ ಚೇಂಜ್' ಸಂಸ್ಥೆ ನಗರದಲ್ಲಿರುವ ಅಂಗಡಿಗಳನ್ನು ಮ್ಯಾಪಿಂಗ್ ಮಾಡುವ ಮೂಲಕ ಈ ಹೋಮ್ ಡೆಲಿವರಿ ಸೇವೆಯ ವ್ಯಾಪ್ತಿಯಲ್ಲಿ ಸೇರಿಸಲು ಸಹಾಯ ಮಾಡುತ್ತಿವೆ.