ಬೆಂಗಳೂರು: ಆಂಧ್ರಪ್ರದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿತರ ವೈದ್ಯಕೀಯ ವೆಚ್ಚವನ್ನು ಆರೋಗ್ಯಶ್ರೀ ಯೋಜನೆ ಅಡಿ ಅಲ್ಲಿನ ಸರ್ಕಾರವೇ ಭರಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕೊರೊನಾ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಗಂಭೀರವಾಗಿರುವ ಸಾವಿರಾರು ರೋಗಿಗಳಿಗೆ ಆಸ್ಪತ್ರೆ ಸಿಗುತ್ತಿಲ್ಲ, ಸಿಕ್ಕರೂ ಆಕ್ಸಿಜನ್ ಹಾಸಿಗೆ ಸಿಗುತ್ತಿಲ್ಲ. ವೆಂಟಿಲೇಟರ್ ದೊರಕುತ್ತಿಲ್ಲ, ಐಸಿಯು ಲಭ್ಯವೇ ಇಲ್ಲ ಈ ಪರಿಸ್ಥಿತಿ ಸುಧಾರಣೆ ಮಾಡಬೇಕು.
ಈ ಮಧ್ಯೆ ಖಾಸಗಿ ಆಸ್ಪತ್ರೆಗಳಲ್ಲಿ ಹಗಲು ಲೂಟಿ ನಡೆಯುತ್ತಿದೆ. ಎಚ್.ಆರ್.ಸಿ.ಟಿ. ಸ್ಕ್ಯಾನ್ ಗೆ 5-6 ಸಾವಿರ ರೂಪಾಯಿ, ರೆಮ್ಡೆಸಿವಿರ್ ಚುಚ್ಚುಮದ್ದಿಗೆ 15-20 ಸಾವಿರ ರೂಪಾಯಿ, ಆಕ್ಸಿಜನ್ ಬೆಡ್, ವೆಂಟಿಲೇಟರ್ ಗೆ 20 -25 ಸಾವಿರಾರು ರೂಪಾಯಿ ಮತ್ತು ಇನ್ನು ಐಸಿಯುಗೆ ಲಕ್ಷಗಟ್ಟಲೆ ಬಿಲ್ ಮಾಡಲಾಗುತ್ತಿದ್ದು, 5-6 ದಿನಗಳ ಚಿಕಿತ್ಸೆಗೆ 8-10 ಲಕ್ಷ ರೂ. ಬಿಲ್ ಮಾಡುತ್ತಿದ್ದಾರೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರು ನಲುಗಿ ಹೋಗುತ್ತಿದ್ದಾರೆ.
ತಮ್ಮ ಆಪ್ತರ ಪ್ರಾಣ ಉಳಿಸಲು ಸಾಲ ಸೋಲ ಮಾಡಿ ಖಾಸಗಿ ಆಸ್ಪತ್ರೆಗಳಿಗೆ ಹಣ ಪಾವತಿ ಮಾಡಿ, ಆ ಸಾಲ ತೀರಿಸಲು ಅವರು ಕನಿಷ್ಠ 4-5 ವರ್ಷ ಜೀವನ ಸವೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಜನರು ಆಸ್ಪತ್ರೆ ವೆಚ್ಚಕ್ಕೆ ಹೆದರಿ ಹಾದಿ ಬೀದಿಯಲ್ಲಿ ಹೆಣವಾಗುತ್ತಿದ್ದಾರೆ ಇದು ನಿಜಕ್ಕೂ ದುರ್ದೈವ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಲಕ್ಷಗಟ್ಟಲೆ ಬಿಲ್ ಮಾಡಲಾಗುತ್ತಿದ್ದು, ಬಡ ಮತ್ತು ಮಧ್ಯಮವರ್ಗದವರು ಈ ವೆಚ್ಚ ಭರಿಸಲು ಮಾಡಿದ ಸಾಲ ತೀರಿಸಲು ಕನಿಷ್ಠ 4-5 ವರ್ಷ ಜೀವನ ಸವೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರವೇ ಆರೋಗ್ಯ ಕರ್ನಾಟಕ ಯೋಜನೆ ಅಡಿ ಸಂಪೂರ್ಣ (ಕ್ಯಾಷ್ ಲೆಸ್) ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೆರೆಯ ಆಂಧ್ರಪ್ರದೇಶದಲ್ಲಿ ಸರ್ಕಾರ ಈವರೆಗೆ 1 ಲಕ್ಷ 33 ಸಾವಿರ ಕೋವಿಡ್ ರೋಗಿಗಳಿಗೆ ಆ ರಾಜ್ಯದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯಶ್ರೀ ಯೋಜನೆ ಅಡಿ ಉಚಿತವಾಗಿ ಚಿಕಿತ್ಸೆ ಕೊಡಿಸಿದೆ. ಇದಕ್ಕಾಗಿ 309 ಕೋಟಿ ರೂಪಾಯಿಗಳನ್ನು ಅಲ್ಲಿನ ಸರ್ಕಾರವೇ ಭರಿಸಿದೆ. ಸಂಕಷ್ಟದ ಸಮಯದಲ್ಲಿ ಜನಪರ ಕಾರ್ಯ ಮಾಡಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ.
ರಾಜ್ಯ ಸರ್ಕಾರವೂ ಈ ಮಾದರಿ ಅನುಸರಿಸಬೇಕು, ಈ ಕೂಡಲೇ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆಯ ಆದೇಶ ಹೊರಡಿಸಬೇಕು, ಇಲ್ಲವಾದರೆ ಎಲ್ಲ ಮುಗ್ಧ ಸೋಂಕಿತರ ಸಾವಿನ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ ಎಂದು ಹೇಳಿದ್ದಾರೆ.