ಬೆಂಗಳೂರು: ಪೊಲೀಸ್ ಪೇದೆ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ನೀಡಿಲ್ಲ ಎಂದು ಆರಂಭಿಸಿದ ಕಾನೂನು ಹೋರಾಟ ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ತೃತೀಯ ಲಿಂಗಿಗಳ ಬೇಡಿಕೆಯನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ ಅವರು ಬಯಸ್ಸಿದ್ದಕ್ಕಿಂತ ಹೆಚ್ಚೇ ನೀಡಿದೆ. ರಾಜ್ಯ ಸರ್ಕಾರದ ಎಲ್ಲ ನೇಮಕಾತಿಗಳಲ್ಲಿ ಶೇ 1ರಷ್ಟು ಹುದ್ದೆಗಳನ್ನು ಸಮತಲ ಮೀಸಲು ಅಡಿಯಲ್ಲಿ ನೀಡಲು ಅಧಿಸೂಚನೆ ಹೊರಡಿಸಿದೆ.
ಲೈಂಗಿಕ ಅಲ್ಪಸಂಖ್ಯಾತರು, ಹೆಚ್‌ಐವಿ ಪೀಡಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಗಮ ಸ್ವಯಂ ಸೇವಾ ಸಂಸ್ಥೆ, ತೃತೀಯ ಲಿಂಗಿಗಳಿಗೆ ರಾಜ್ಯ ಮೀಸಲು ವಿಶೇಷ ಪೊಲೀಸ್ ಪಡೆಯಲ್ಲಿ ಮೀಸಲು ಕಲ್ಪಿಸಿಲ್ಲ ಎಂದು ಆಕ್ಷೇಪಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಬರೀ ಅರ್ಜಿದಾರರ ಕೋರಿಕೆಯನ್ನಷ್ಟೇ ಪರಿಗಣಿಸದೆ ತೃತೀಯ ಲಿಂಗಿಗಳ ಹಕ್ಕುಗಳ ಕುರಿತು ಮಾಹಿತಿ ಕೇಳಿತ್ತು.
ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರುವ ತೃತೀಯ ಲಿಂಗಿಗಳಿಗೆ ಸಂವಿಧಾನದಡಿಯಲ್ಲಿ ಲಭ್ಯವಾಗಬೇಕಿರುವ ಸೌಲಭ್ಯಗಳು ಹಾಗೂ ಸುಪ್ರೀಂ ಕೋರ್ಟ್ ಈ ಹಿಂದೆ ತೃತೀಯ ಲಿಂಗಿಗಳಿಗೆ ಮೀಸಲು ಕಲ್ಪಿಸುವ ಸಂಬಂಧ ನೀಡಿರುವ ಆದೇಶದ ಕುರಿತು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೃತೀಯ ಲಿಂಗಿಗಳಿಗೆ ಒಬಿಸಿ ಅಡಿಯಲ್ಲಿ ಮೀಸಲು ಕಲ್ಪಿಸುವ ಕುರಿತು ವಿವರಣೆ ಕೇಳಿತ್ತು.
ನಾಗರಿಕ ಸೇವಾ ನೇಮಕಾತಿ ನಿಯಮಗಳಿಗೆ ತಿದ್ದುಪಡಿ : ಅಂತಿಮವಾಗಿ ರಾಜ್ಯ ಸರ್ಕಾರ ತನ್ನ ಎಲ್ಲ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1ರಷ್ಟು ಸಮತಲ ಮೀಸಲು ಕಲ್ಪಿಸಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯನೇಮಕಾತಿ) ನಿಯಮ-1977ಕ್ಕೆ ತಿದ್ದುಪಡಿ ತಂದು ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಪಾಟೀಲ್, ಸರ್ಕಾರದ ಎಲ್ಲ ಹುದ್ದೆಗಳ ನೇಮಕಾತಿ ವೇಳೆ ತೃತೀಯ ಲಿಂಗಿಗಳಿಗೆ ಎಲ್ಲಾ ವರ್ಗಗಳಲ್ಲಿ ಶೇ.1ರಷ್ಟು ಸಮತಲ (ಹಾರಿಜಾಂಟಲ್ ರಿಸರ್ವೇಷನ್) ಮೀಸಲು ಕಲ್ಪಿಸಿ ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ-1977ರ ನಿಯಮ 9ಕ್ಕೆ ತಿದ್ದುಪಡಿ ತಂದು 1(ಡಿ)ಯನ್ನು ಸೇರ್ಪಡೆಗೊಳಿಸಿದ್ದೇವೆ. ಈ ಸಂಬಂಧ 2021ರ ಜುಲೈ 6ರಂದು ಅಂತಿಮ ಅಧಿಸೂಚನೆ ಪ್ರಕಟಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಅಧಿಸೂಚನೆ ಸಾರಾಂಶ: ನಿಯಮ 9ಕ್ಕೆ ತಿದ್ದುಪಡಿ ತಂದು ಸೇರಿಸಿರುವ 1(ಡಿ) ಪ್ರಕಾರ, ಸರ್ಕಾರದ ಯಾವುದೇ ನೇಮಕಾತಿಯಲ್ಲಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಿಂದಲೂ ಶೇ.1ರಷ್ಟು ಹುದ್ದೆಗಳನ್ನು ತೃತೀಯ ಲಿಂಗಿಗಳಿಗೆ ಮೀಸಲು ಇರಿಸತಕ್ಕದ್ದು. ಪ್ರತಿಯೊಂದು ನೇಮಕಾತಿ ಪ್ರಾಧಿಕಾರವು ಗ್ರೂಪ್-ಎ, ಬಿ, ಸಿ ಮತ್ತು ಡಿ ವೃಂದಗಳ ಹುದ್ದೆಗಳ ನೇಮಕಾತಿಗೆ ಆಹ್ವಾನಿಸುವ ಅರ್ಜಿಯಲ್ಲಿ ತೃತಿಯ ಲಿಂಗ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪುರುಷ ಮತ್ತು ಸ್ತ್ರೀ ಜೊತೆಗೆ ಇತರೆ ಎಂಬ ಪ್ರತ್ಯೇಕ ಕಾಲಂ ನಮೂದಿಸಬೇಕು.
ಯಾವುದೇ ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಆಯ್ಕೆ ಪ್ರಕ್ರಿಯೆಯಲ್ಲಿ ತೃತೀಯ ಲಿಂಗಿಗಳಿಗೆ ತಾರತಮ್ಯ ಮಾಡುವಂತಿಲ್ಲ. ತೃತೀಯ ಲಿಂಗಿಗಳಿಗೆ ಮೀಸಲಿಟ್ಟ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ಸಿಗದಿದ್ದರೆ, ಆ ಹುದ್ದೆಗಳನ್ನು ಅದೇ ಪ್ರವರ್ಗದ ಪುರುಷ ಮತ್ತು ಮಹಿಳಾ ಅಭ್ಯರ್ಥಿಯಿಂದ ಭರ್ತಿ ಮಾಡತಕ್ಕದ್ದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ದೇಶದಲ್ಲೇ ಪ್ರಥಮ: ಕೆಲವು ರಾಜ್ಯಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲು ಕಲ್ಪಿಸಲಾಗಿದೆ. ಆದರೆ, ಇಡೀ ದೇಶದಲ್ಲೇ ತೃತೀಯ ಲಿಂಗಗಳಿಗೆ ಸರ್ಕಾರಿ ಹುದ್ದೆಯಲ್ಲಿ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ರಾಜ್ಯ ಸರ್ಕಾರದ ಈ ಉದಾರ ಕ್ರಮವನ್ನು ಅರ್ಜಿದಾರರ ಪರ ವಕೀಲರೇ ಖುದ್ದು ಪ್ರಶಂಸಿದ್ದಾರೆ. ಮೀಸಲು ನೀಡುವ ವಿಚಾರದಲ್ಲಿ ತೃತೀಯ ಲಿಂಗಿಗಳ ಕುರಿತು ಸೂಕ್ತ ನಿರ್ಣಯ ತೆಗೆದುಕೊಂಡಿರುವ ಸರ್ಕಾರದ ನಿಲುವಿಗೆ ನ್ಯಾಯಾಲಯವೂ ಮೆಚ್ಚುಗೆ ವ್ಯಕ್ತಪಡಿಸಿದೆ.
ಪ್ರಾಧಿಕಾರಗಳ ಉದ್ಯೋಗದಲ್ಲೂ ಮೀಸಲು ಬೇಡಿಕೆ: ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿರುವ ಜೀವಾ ಎಂಬ ಎನ್‌ಜಿಓ ಸರ್ಕಾರದ ತಿದ್ದುಪಡಿ ನಿಯಮವು ಬರೀ ಸರ್ಕಾರಿ ಹುದ್ದೆಗಳಿಗೆ ಮಾತ್ರವೇ ಅನ್ವಯಿಸುತ್ತದೆ. ಹೀಗಾಗಿ ಸರ್ಕಾರದ ಇತರೆ ಪ್ರಾಧಿಕಾರ ಹಾಗೂ ನಿಗಮ-ಮಂಡಳಿಗಳ ನೇಮಕಾತಿಗಳಲ್ಲಿಯೂ ಈ ತಿದ್ದುಪಡಿ ನಿಯಮ ಜಾರಿಗೊಳಿಸಬೇಕು ಎಂದು ಕೋರಿದ್ದಾರೆ. ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಪೀಠ, ಸರ್ಕಾರದ ಇತರೆ ಪ್ರಾಧಿಕಾರ ಹಾಗೂ ನಿಗಮ-ಮಂಡಳಿಗಳ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಶೇ.1ರಷ್ಟು ಮೀಸಲು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
ಮುಂದಿನ ವಿಚಾರಣೆ ಆಗಸ್ಟ್ 18ಕ್ಕೆ ನಿಗದಿಯಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತೂ ನ್ಯಾಯಾಲಯ ಮಾಹಿತಿ ಕೇಳಿದೆ. ಒಟ್ಟಾರೆ ಕೇವಲ ಪೊಲೀಸ್ ಪೇದೆಗಳ ನೇಮಕಾತಿಯಲ್ಲಷ್ಟೇ ಮೀಸಲು ಕೋರಿ ಸಲ್ಲಿಸಿದ್ದ ಅರ್ಜಿ ತೃತೀಯ ಲಿಂಗಿಗಳ ಪಾಲಿಗೆ ಬಹು ದೊಡ್ಡ ಗೆಲುವು ತಂದುಕೊಟ್ಟಿದೆ.
ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಸಂಪುಟ ಸಹೋದ್ಯೋಗಿಗಳಲ್ಲಿ ಆತಂಕ