ಬೆಂಗಳೂರು: ನಾಲ್ಕು ದಶಕದ ರಾಜಕೀಯ ಅನುಭವ ಇರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮದೇ ಆದ ರೀತಿಯಲ್ಲಿ ದಾಳವನ್ನು ಉರುಳಿಸುವ ಮೂಲಕ ರಾಜಕೀಯ ಚದುರಂಗದಾಟದಲ್ಲಿ ಸ್ವಪಕ್ಷೀಯ ವಿರೋಧಿಗಳಿಗೆ ಟಕ್ಕರ್ ನೀಡಿದ್ದಾರೆ. ಹೈಕಮಾಂಡ್ ಬೆಂಬಲವೂ ತಮಗಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಪಾಳಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಆಂತರಿಕ ಕಲಹ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಹೈಕಮಾಂಡ್ ಹೇಳಿದರೆ ರಾಜೀನಾಮೆಗೆ ಸಿದ್ದ ಎನ್ನುವ ಯಡಿಯೂರಪ್ಪ ಹೇಳಿಕೆ ಕೇಸರಿ ಪಡೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಚಿವ ಸಿ.ಪಿ ಯೋಗೀಶ್ವರ್ ಮತ್ತು ಸಿಎಂ ಪುತ್ರ ಬಿ.ವಿ ವಿಜಯೇಂದ್ರ ದೆಹಲಿ ಪ್ರವಾಸದ ನಂತರ ಆಡಳಿತ ಪಕ್ಷದಲ್ಲಿ ಹೊಸ ಅಲೆ ಎದ್ದಿದೆ.
ಯೋಗೀಶ್ವರ್ ದೆಹಲಿಗೆ ಭೇಟಿ ನಂತರ ಎದ್ದಿದ್ದ ನಾಯಕತ್ವ ಬದಲಾವಣೆ ವದಂತಿಗೆ ಸಿಎಂ ಆಪ್ತರೆಲ್ಲ ಸೇರಿ ಬಿಎಸ್ವೈ ಪರ ಬ್ಯಾಟಿಂಗ್ ನಡೆಸಿ ಸೈನಿಕನಿಗೆ ಟಾಂಗ್ ನೀಡಿದ್ದರು. ಆದರೆ ಸಿಎಂ ಪುತ್ರ ದೆಹಲಿಗೆ ಭೇಟಿ ನೀಡಿ ವರಿಷ್ಠರನ್ನು ಭೇಟಿ ಮಾಡುತ್ತಿದ್ದಂತೆ ಯಡಿಯೂರಪ್ಪ ಟೀಂ ಯೋಗೀಶ್ವರ್ ವಿರುದ್ಧ ಮುಗಿಬಿದ್ದಿತ್ತು. ಟೀಕೆಗಳ ಮೂಲಕ ಕಿಡಿ ಕಾರಿ, ಶಿಸ್ತುಕ್ರಮಕ್ಕೆ ಒತ್ತಾಯಿಸಿತ್ತು.
ಆದರೆ ನಿನ್ನೆ ಏಕಾಏಕಿ ಯಡಿಯೂರಪ್ಪ ರಾಜೀನಾಮೆಗೆ ಸಿದ್ದ ಎನ್ನುವ ಹೊಸ ಬಾಂಬ್ ಸಿಡಿಸಿದ್ದು, ಬಿಜೆಪಿ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಿಎಂ ಹೇಳಿಕೆ ಬೆನ್ನಲ್ಲೇ ಹಿರಿಯ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಸಿಎಂ ನಿವಾಸ ಕಾವೇರಿಗೆ ದೌಡಾಯಿಸಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದರು. ನಿಮ್ಮೊಂದಿಗೆ ಇಡೀ ಸಂಪುಟ, ಪಕ್ಷ ಇರಲಿದೆ ಎನ್ನುವ ಭರವಸೆ ನೀಡಿದ್ದರು. ಕೇಂದ್ರ ಸಚಿವರು ಕೂಡ ಯಡಿಯೂರಪ್ಪ ಪರ ಹೇಳಿಕೆ ನೀಡಿದ್ದರು.
ಇಂದು ಕೂಡ ಸಿಎಂ ನಿವಾಸಕ್ಕೆ ಆಪ್ತರ ದಂಡು ಆಗಮಿಸುತ್ತಿದೆ. ಶ್ರೀರಾಮುಲು, ಬೈರತಿ ಬಸವರಾಜ್, ನಾರಾಯಣಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಶಾಸಕ ಎಸ್.ರಘು, ಮಾಜಿ ಶಾಸಕ ಸುರೇಶ್ ಗೌಡ ಸೇರಿದಂತೆ ಹಲವು ನಾಯಕರು ಕಾವೇರಿಗೆ ದೌಡಾಯಿಸಿದರು. ಯಡಿಯೂರಪ್ಪ ಪರ ನಿಲ್ಲುವ ಹೇಳಿಕೆ ನೀಡಿದರು. ಯಾವುದೇ ಕಾರಣಕ್ಕೂ ರಾಜೀನಾಮೆಯಂತಹ ನಿರ್ಧಾರಕ್ಕೆ ಮುಂದಾಗಬಾರದು, ಅವಧಿ ಪೂರ್ಣಗೊಳಿಸಬೇಕು. ನಿಮ್ಮ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಬೇಕು ಎನ್ನುವ ಹೇಳಿಕೆ ನೀಡಿದರು.
ಇನ್ನೊಂದೆಡೆ ಇಡೀ ರಾಜ್ಯ ಘಟಕ ಬಿಎಸ್ವೈಗೆ ಬೆಂಬಲ ವ್ಯಕ್ತಪಡಿಸಿದೆ. ಯಡಿಯೂರಪ್ಪ ನಮ್ಮ ಸರ್ವಸಮ್ಮತ ನಾಯಕ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎನ್ನುವ ಹೇಳಿಕೆಯನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯ ಪದಾಧಿಕಾರಿಗಳು ನೀಡಿದ್ದಾರೆ. ಯಡಿಯೂರಪ್ಪ ಅವರ ಒಂದೇ ಒಂದು ಹೇಳಿಕೆ ಇಡೀ ಮಂತ್ರಿ ಮಂಡಲ ಹಾಗು ರಾಜ್ಯ ಘಟಕ ಯಡಿಯೂರಪ್ಪ ಬೆನ್ನಿಗೆ ನಿಲ್ಲುವಂತೆ ಮಾಡಿದೆ. ಆ ಮೂಲಕ ಸ್ವಪಕ್ಷೀಯ ವಿರೋಧಿಗಳ ಕೈ ಕಟ್ಟಿಹಾಕುವಂತೆ ಮಾಡುವಲ್ಲಿ ಸಿಎಂ ಯಡಿಯೂರಪ್ಪ ಸಫಲರಾಗಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವವರ ಬಾಯಿಗೆ ಬೀಗ ಹಾಕುವ ಜೊತೆಗೆ ಮುಂದಿನ ಎರಡು ವರ್ಷ ತಮ್ಮ ಮುಖ್ಯಮಂತ್ರಿ ಕುರ್ಚಿ ಭದ್ರ ಎನ್ನುವ ಸಂದೇಶವನ್ನು ಹೈಕಮಾಂಡ್ ನಿಂದಲೇ ಪಡೆದುಕೊಳ್ಳುವಲ್ಲಿ ಸಿಎಂ ಸಫಲರಾಗಿದ್ದಾರೆ. ಜೊತೆಗೆ ಆಪ್ತರ ಮೂಲಕ ಮುಂದಿನ ಚುನಾವಣೆಯ ನೇತೃತ್ವದ ಬೇಡಿಕೆಯನ್ನು ಹೈಕಮಾಂಡ್ ತಲುಪಿಸಿ ತಾವಿನ್ನೂ ರಾಜಕೀಯದಲ್ಲಿ ಶಕ್ತನಿದ್ದೇನೆ ಎನ್ನುವ ಸಂದೇಶವನ್ನು ಹೈಕಮಾಂಡ್ಗೆ ತಲುಪಿಸಿ ರಾಜಕೀಯ ವೃದ್ದಾಶ್ರಮಕ್ಕೆ ಸೇರಲಾರೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆಗೆ ಸಿದ್ದ ಅಂದಿದ್ದೇಕೆ?
ಸ್ವಪಕ್ಷೀಯ ರಾಜಕೀಯ ವಿರೋಧಿಗಳನ್ನು ಹಣಿಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಅನ್ನೇ ಬಳಸಿಕೊಳ್ಳುವ ರಾಜಕೀಯ ದಾಳ ಉರುಳಿಸಿದ್ದಾರೆ. ಹೈಕಮಾಂಡ್ನ ಕೆಲವರ ಬೆಂಬಲ ಇಲ್ಲದೇ ಯಾರೂ ಕೂಡ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಹೈಕಮಾಂಡ್ ನಾಯಕರನ್ನೇ ಈ ವಿಚಾರದಲ್ಲಿ ಎಳೆದು ತಂದು ರಾಜಕೀಯ ಜಾಣ್ಮೆಯನ್ನು ಮೆರೆದಿದ್ದಾರೆ. ಹೈಕಮಾಂಡ್ ಹೇಳಿದರೆ ರಾಜೀನಾಮೆಗೆ ಸಿದ್ದ ಎನ್ನುವ ಹೇಳಿಕೆ ಮೂಲಕ ಸಂಪುಟ ಸಹೋದ್ಯೋಗಿಗಳು ರಾಜ್ಯ ನಾಯಕರ ಅನುಕಂಪ ಗಿಟ್ಟಿಸಿಕೊಳ್ಳುವ ಜೊತೆಗೆ ಹೈಕಮಾಂಡ್ ಕೂಡ ತಮ್ಮ ಪರವಾಗಿಯೇ ಬೆಂಬಲ ಪ್ರಕಟಿಸುವ ಅನಿವಾರ್ಯ ಸೃಷ್ಟಿಯಾಗುವಂತೆ ಮಾಡುವಲ್ಲಿ ಸಿಎಂ ಸಫಲರಾಗಿದ್ದಾರೆ. ಒಂದೇ ಕಲ್ಲಿಗೆ ಸಿಎಂ ಎರಡು ಹಕ್ಕಿ ಹೊಡೆಯುವ ರಾಜಕೀಯ ತಂತ್ರಗಾರಿಕೆ ಅನುಸರಿಸಿ ಕುರ್ಚಿ ಸೇಫ್ ಮಾಡಿಕೊಂಡಿದ್ದಾರೆ.
ಶಾಸಕಾಂಗ ಸಭೆ ಬೇಡಿಕೆಗೆ ಉತ್ತರ:
ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ ಶಾಸಕಾಂಗ ಸಭೆಗೆ ಕೆಲ ನಾಯಕರು ಬೇಡಿಕೆ ಇಡುತ್ತಿದ್ದರು. ಇದರ ಅಗತ್ಯವಿಲ್ಲ ಎನ್ನುವ ಸಂದೇಶವನ್ನೂ ಸಿಎಂ ಇದೀಗ ನೀಡಿದ್ದಾರೆ. ಸಂಪುಟ ಸಹೋದ್ಯೋಗಿಗಳು ಮಾತ್ರವಲ್ಲ ದೊಡ್ಡ ಸಂಖ್ಯೆ ಶಾಸಕರು ಸಿಎಂ ನಿವಾಸಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ದೂರವಾಣಿ ಕರೆ ಮಾಡಿ ಸಿಎಂ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಆ ಮೂಲಕ ಶಾಸಕಾಂಗ ಪಕ್ಷದ ನಾಯಕನ ಪರ ನಿಲುವು ವ್ಯಕ್ತಪಡಿಸುತ್ತಿದ್ದು, ಶಾಸಕಾಂಗ ಪಕ್ಷದ ಸಭೆ ಕರೆಯುವ ಅಗತ್ಯತೆ ಇಲ್ಲ ಎನ್ನುವ ಸಂದೇಶವನ್ನೂ ವಿರೋಧಿ ಪಾಳಯಕ್ಕೆ ಸಿಎಂ ನೀಡಿದ್ದಾರೆ ಎನ್ನಲಾಗಿದೆ.
ವಿಜಯೇಂದ್ರ ದೆಹಲಿ ಭೇಟಿ ಫಲ:
ರಾಜ್ಯದಲ್ಲಿ ಕೊರೊನಾ ನಿರ್ವಹಣೆಗೆ ಸಿಎಂ ಯಡಿಯೂರಪ್ಪ ನಡೆಸುತ್ತಿರುವ ಪ್ರಯತ್ನಗಳು, ಸಭೆಗಳು, ಖುದ್ದು ಆರೈಕೆ ಕೇಂದ್ರ, ವಾರ್ ರೂಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ವಿವರಗಳನ್ನು ಸಿಎಂ ಪುತ್ರ ವಿಜಯೇಂದ್ರ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ. ಬೇರೆ ರಾಜ್ಯದ ಮುಖ್ಯಮಂತ್ರಿಗಳು ಮನೆಯಿಂದ ಹೊರಬಾರದೆ ಕುಳಿತಿರುವಾಗ ಇಳಿ ವಯಸ್ಸಿನಲ್ಲೂ ಸಿಎಂ ಚುರುಕಾಗಿ ಕೆಲಸ ಮಾಡುತ್ತಿರುವುದನ್ನು ಮನವರಿಕೆ ಮಾಡಿ ಕೊಟ್ಟಿದ್ದಾರೆ.
ಹಗಲಿರುಳು ಕೋವಿಡ್ ನಿಯಂತ್ರಣಕ್ಕೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವದಂತಿ ಮೂಲಕ ಗೊಂದಲ ಸೃಷ್ಟಿಸುವ ಪ್ರಯತ್ನದ ಬಗ್ಗೆ ದೂರು ನೀಡಿದ್ದಾರೆ. ಯೋಗೀಶ್ವರ್ ತಂಡದ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಹೈಕಮಾಂಡ್ ನಾಯಕರು ಸಕಾರಾತ್ಮಕ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅದರ ಮುಂದುವರೆದ ಭಾಗವಾಗಿ ಯಡುಯೂರಪ್ಪ ರಾಜೀನಾಮೆ ಹೇಳಿಕೆ ನೀಡಿದ್ದಾರೆ ಆ ಮೂಲಕ ವಿರೋಧಿಗಳ ಹಣಿಯಲು ಮುಂದಾಗಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ರಾಜೀನಾಮೆ ವಿಚಾರ: ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವ ಈಶ್ವರಪ್ಪ!