ಬೆಂಗಳೂರು: ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮಹತ್ವಾಕಾಂಕ್ಷೆಯ ಫ್ಯೂಚರ್ ಡಿಜಿಟಲ್ ಜಾಬ್ಸ್ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಚಾಲನೆ ನೀಡಿದರು.
ವಿಧಾನಸೌಧದಲ್ಲಿ ರಾಜ್ಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಂಸ್ಥೆಗಳು ಒಡಂಬಡಿಕೆಗೆ ಸಹಿ ಹಾಕಿದವು. ಫ್ಯೂಚರ್ ಡಿಜಿಟಲ್ ಜಾಬ್ಸ್ ಉಪಕ್ರಮಕ್ಕೆ ಹಸಿರು ನಿಶಾನೆಯನ್ನು ಸಚಿವರು ತೋರಿಸಿದರು. ಈ ಕಾರ್ಯಕ್ರಮದಿಂದ ರಾಜ್ಯದ 92 ಸರ್ಕಾರಿ ಪಾಲಿಟೆಕ್ನಿಕ್ ಮತ್ತು 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಅವರ ಕನಸಿನ ಉದ್ಯೋಗ ಸಿಗಲಿದೆ. ಇನ್ನೊಂದೆಡೆ ಉದ್ಯಮರಂಗಕ್ಕೆ ಬೇಕಾದ ಸ್ವರೂಪದಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು. ಇದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ ಹಿಂಪಡೆದಿದ್ದು ಸಿಎಂಗೆ ಸಿಕ್ಕ ರಾಜತಾಂತ್ರಿಕ ಜಯ: ಸಚಿವ ಡಾ.ಕೆ.ಸುಧಾಕರ್
ಈ ನೂತನ ಕಾರ್ಯಕ್ರಮದ ಅನ್ವಯ ಸರ್ಕಾರಿ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಫ್ಯೂಚರ್ ಡಿಜಿಟಲ್ ಜಾಬ್ಸ್ ಯೋಜನೆಯನ್ನು ಒಂದು ವಿಶೇಷ ಆಂದೋಲನದಂತೆ ಹಮ್ಮಿಕೊಳ್ಳಲಾಗುವುದು. ಜೊತೆಗೆ ಅರ್ಥಪೂರ್ಣ ಇಂಟರ್ನ್ಶಿಪ್, ಪ್ರಾಜೆಕ್ಟ್ಗಳು ಮತ್ತು ಉದ್ಯೋಗ ನೇಮಕಾತಿ ಕನಸು ನನಸಾಗುವಂತೆ ವೃತ್ತಿ ಸಮಾಲೋಚನೆ ಹಾಗೂ ಮಾರ್ಗದರ್ಶನವನ್ನು ನೀಡಲಾಗುವುದು ಎಂದು ಹೇಳಿದರು.
ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪರಿಪೋಷಣೆ ಮತ್ತು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಉದ್ಯಮಗಳೊಂದಿಗೆ ಸೇರಿಕೊಂಡು ತಾಂತ್ರಿಕ ಶಿಕ್ಷಣದ ಪಠ್ಯಕ್ರಮವನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಿ, ಬೋಧನಾ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುವುದು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕೆಡಿಇಎಂ ನಡುವಿನ ಒಡಂಬಡಿಕೆಯು ಬೆಂಗಳೂರಿನಿಂದ ಹೊರಗಿರುವ ಕೈಗಾರಿಕೋದ್ಯಮಗಳಲ್ಲಿ ವಿದ್ಯಾರ್ಥಿಗಳು ಅಲ್ಲಿರುವ ಉದ್ಯೋಗಗಳನ್ನು ಕುರಿತು ಸಂಶೋಧನೆ ನಡೆಸಲು ಅನುವು ಮಾಡಿಕೊಡಲಿದೆ. ಜತೆಗೆ ಉದ್ಯಮಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ಒದಗಿಸಲಿದ್ದು, ನಿಯಮಿತವಾಗಿ ವಿಚಾರ ಸಂಕಿರಣಗಳನ್ನು ಕೂಡ ಆಯೋಜಿಸಲಾಗುವುದು. ಇದರಿಂದ ಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎಂದರು.