ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಕಾಲೆಳೆಯಲು ಹೋಗಿ ಮಾಜಿ ಸಚಿವ ವಿ. ಸೋಮಣ್ಣ ಪೇಚಿಗೆ ಸಿಲುಕಿಕೊಂಡರೆ, ಸೋಮಣ್ಣರನ್ನು ಮುಂದಿಟ್ಟುಕೊಂಡೇ ಮತ್ಯಾರಿಗೋ ಆರ್. ಅಶೋಕ್ ಟಾಂಗ್ ನೀಡಿದ ಘಟನೆ ಸುತ್ತೂರು ಮಠದಲ್ಲಿ ನಡೆಯಿತು.
ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಸುತ್ತೂರು ಸದನಕ್ಕೆ ಬಿಜೆಪಿ ನಿಯೋಜಿತ ಅಭ್ಯರ್ಥಿ ತೇಜಸ್ವಿನಿ ಅನಂತ್ ಕುಮಾರ್ ಭೇಟಿ ನೀಡಿದರು. ಅವರಿಗೆ ಮಾಜಿ ಡಿಸಿಎಂ ಆರ್.ಅಶೋಕ್ ಮತ್ತು ವಿ.ಸೋಮಣ್ಣ ಸಾಥ್ ನೀಡಿದರು. ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಸುತ್ತೂರು ಶ್ರೀಗಳ ಎದುರೇ ವಿ. ಸೋಮಣ್ಣ ಮತ್ತು ಆರ್. ಅಶೋಕ್ ಪರಸ್ಪರ ಕಿಂಡಲ್ ಮಾಡಿಕೊಂಡ ಘಟನೆ ನಡೆಯಿತು.
ಆರ್. ಅಶೋಕ್ಗೆ ಟಾಂಗ್ ಕೊಟ್ಟು ಸೋಮಣ್ಣ ಪೇಚಿಗೀಡಾದರೆ, ಸ್ವಾಮೀಜಿ ಎದುರೇ ಸೋಮಣ್ಣಗೆ ಆರ್. ಅಶೋಕ್ ಟಕ್ಕರ್ ಕೊಟ್ಟರು. ಈ ಬಾರಿ ಚಕ್ರವರ್ತಿ ನೇತೃತ್ವದಲ್ಲಿ ಚುನಾವಣೆ ಎದುರಿಸ್ತಿದ್ದೀವಿ, ಎಲ್ಲವೂ ಚಕ್ರವರ್ತಿಗಳದ್ದೇ ಎಂದು ವಿ. ಸೋಮಣ್ಣ ಹೇಳಿದರು. ನಂತರ ಅಷ್ಟಕ್ಕೇ ಸುಮ್ಮನಾಗದೆ ಚಕ್ರವರ್ತಿಗೆ ಎಲ್ಲವೂ ಇದೆ, ಆದರೆ, ಧೈರ್ಯ ಕಡಿಮೆ ಎಂದು ಸ್ವಾಮೀಜಿ ಎದುರೇ ಕಿಂಡಲ್ ಮಾಡಿದರು. ವಿ. ಸೋಮಣ್ಣಂಗೆ ನಸು ನಗುತ್ತಲೇ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಹೇ ಹಾಗೇನಿಲ್ಲ ಸ್ವಾಮೀಜಿ ಎಲ್ಲರೂ ನನ್ನ ಯ್ಯೂಸ್ ಮಾಡ್ಕೊತಾರೆ ಅಷ್ಟೇ, ಕೆಟ್ಟದ್ದೇನಾದರೂ ಆದರೆ ಅಶೋಕ ಅಂತಾರೆ, ಒಳ್ಳೇದಾದರೆ ನಾವು ಲೆಕ್ಕಕ್ಕೆ ಇರೊಲ್ಲ ಎಂದು ಟಕ್ಕರ್‌ಕೊಟ್ಟರು. ಸುತ್ತೂರು ಸ್ವಾಮೀಜಿ ಎದುರು ಹೆಗ್ಗಳಿಕೆ ಪಡೆಯಲು ಹೋಗಿ ಪೇಚಿಗೆ ಸಿಲುಕಿದ ವಿ. ಸೋಮಣ್ಣ ಕೊನೆಗೆ ಆರ್. ಅಶೋಕ್ ಅವರದ್ದು ಒಳ್ಳೆಯ ಹೃದಯ ಎಂದು ಸಮಾಧಾನ ಮಾಡುವ ಪ್ರಯತ್ನ ನಡೆಸಿದರು.
ವಾಸ್ತವವಾಗಿ ಅಶೋಕ್ ಟಕ್ಕರ್ ನೀಡಿದ್ದು ಬಿಜೆಪಿ ನಿಯೋಜಿತ ಅಭ್ಯರ್ಥಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಎನ್ನಲಾಗಿದೆ. ಅನಂತ್ ಕುಮಾರ್ ಜೊತೆ ಕೆಲಸ ಮಾಡಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರೂ ತೇಜಸ್ವಿನಿ ಅವರ ವರ್ತನೆ ಬಗ್ಗೆ ಹಿಂದಿನಿಂದಲೂ ಆರ್. ಅಶೋಕ್ ಮತ್ತು ಸೋಮಣ್ಣ ಅವರಿಗೆ ಅಸಮಧಾನ ಇತ್ತು ಎನ್ನುವ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಹರಿದಾಡುತ್ತಿದ್ದು, ಪರೋಕ್ಷವಾಗಿ ಇಂದು ತೇಜಸ್ವಿನಿ ಅನಂತ್ ಕುಮಾರ್ಗೆ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ.