ಬೆಂಗಳೂರು : ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯದ ಸಚಿವರು ಹಾಗೂ ಶಾಸಕರ ವೇತನದ ಶೇ. 30 ರಷ್ಟು ಒಂದು ವರ್ಷಗಳ ಕಾಲ ಕಡಿತಗೊಳಿಸಿ, ಆ ಹಣವನ್ನು ಕೊರೊನಾ ತಡೆ ನಿಧಿಗೆ ಬಳಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿಧಾನಸೌಧದಲ್ಲಿ ಇಂದು ತುರ್ತು ಸಚಿವ ಸಂಪುಟದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಶಾಸಕರು ಹಾಗೂ ಸಚಿವರ ವೇತನದಲ್ಲಿ ಶೇ. 30 ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಉಳಿತಾಯವಾಗುವ 15.36 ಕೋಟಿ ರೂ. ಹೆಚ್ಚಿನ ಹಣ ಕೋವಿಡ್-19 ನಿಧಿಗೆ ನೀಡಲು ಸಂಪುಟ ಸಭೆ ತೀರ್ಮಾನ ಮಾಡಿದೆ. ಸುಗ್ರೀವಾಜ್ಞೆ ಮೂಲಕ ಈ ಆದೇಶ ಜಾರಿ ಮಾಡಲಾಗುವುದು ಎಂದು ತಿಳಿಸಿದರು. ಅಲ್ಲದೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಬಾಕಿ ಇರುವವರಿಗೂ ಪಡಿತರವನ್ನು ನೀಡುವ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ ಎಂದರು.
ಕುಡಿಯುವ ನೀರಿಗೆ ಒಂದು ಕೋಟಿ : ರಾಜ್ಯದಲ್ಲಿ ಬರಪೀಡಿತ 49 ತಾಲೂಕುಗಳಿಗೆ ಕುಡಿಯುವ ನೀರಿಗಾಗಿ ತಲಾ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಗ್ರಾಮೀಣ ಪಟ್ಟಣ ಪಂಚಾಯಿತಿಗಳಿಗೆ 50 ಲಕ್ಷ ರೂ. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. 94 ಎ ಅಡಿ ಭೂಮಿ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿರುವವರು ಇತ್ಯರ್ಥ ಆಗುವ ತನಕ ಕೇಸ್ ಹಾಕಲ್ಲ ಎಂದು ಹೇಳಿದರು.
ಜಿಎಸ್ ಟಿ ಪಾವತಿ ಅವಧಿ ವಿಸ್ತರಣೆ : ಜಿಎಸ್‌ಟಿ ಪಾವತಿ ಅವಧಿಯನ್ನು ಜೂನ್. 30 ರವರೆಗೂ ವಿಸ್ತರಿಸಲಾಗಿದ್ದು, ಸಂಕಷ್ಟದಲ್ಲಿರುವ ಹೂ ಬೆಳೆಗಾರರಿಗೆ ಪರಿಹಾರ ನೀಡುವ ಸಂಬಂಧವೂ ಸಮೀಕ್ಷೆ ನಡೆಸಿ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ವಿವರಿಸಿದರು.
ಮದ್ಯ ಮಾರಾಟಕ್ಕೆ ಅವಕಾಶದ ಬಗ್ಗೆ ಚರ್ಚೆ : ಇನ್ನು ಈ ತಿಂಗಳ 14ರ ನಂತರ ಚಿಲ್ಲರೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಬಾರ್ ಮತ್ತು ಹೋಟೆಲ್‌ಗಳ ಬಂದ್ ಮುಂದುವರೆಸಿ ಚಿಲ್ಲರೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿದ್ದು, ಯಾವುದೇ ಅಂತಿಮ ತೀರ್ಮಾನಗಳು ಆಗಿಲ್ಲ ಎಂದು ಹೇಳಲಾಗುತ್ತಿದೆ.
ಅಂತರ ಕಾಯ್ದುಕೊಂಡ ಸಚಿವರು : ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಚಿವ ಸಂಪುಟ ಸಭೆಯನ್ನು ಸಚಿವ ಸಂಪುಟ ಸಭಾಮಂದಿರದ ಬದಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲೇ ನಡೆಸಲಾಗುತ್ತಿದ್ದು, ಇಂದಿನ ಸಚಿವ ಸಂಪುಟ ಸಭೆ ಸಹ ಸಮ್ಮೇಳನ ಸಭಾಂಗಣದಲ್ಲೇ ನಡೆಸಲಾಯಿತು.