ಬೆಂಗಳೂರು: 20 ಸರ್ಕಾರಿ ಶಾಲೆಗಳಿಗೆ ಶೈಕ್ಷಣಿಕ ಸಂಪನ್ಮೂಲ, ಮೂಲಸೌಕರ್ಯ ಒದಗಿಸುವ ದೈನಂದಿನ ನಿರ್ವಹಣೆ ಮತ್ತು ಸಮಗ್ರ ಆರೋಗ್ಯ ಕಾರ್ಯಕ್ರಮವನ್ನು ಒದಗಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಜೊತೆಗಿನ ಒಪ್ಪಂದವನ್ನು ಎಂಬೆಸ್ಸಿ ಗ್ರೂಪ್ ನವೀಕರಿಸಿ ಸಹಿ ಹಾಕಿದೆ.
ಬೆಂಗಳೂರಿನ ವಿವಿಧ ಭಾಗದ ಆಯ್ದ 20 ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ ಶಾಲೆಗಳನ್ನು ಸಬಲೀಕಣಗೊಳಿಸಲು 15 ಕೋಟಿ ವಿನಿಯೋಗ ಮಾಡಲು 2020 ರ ಅಕ್ಟೋಬರ್ ನಿಂದ 2022 ರ ಸೆಪ್ಟೆಂಬರ್ವರೆಗೆ ಅನ್ವಯವಾಗುವಂತೆ ಒಡಂಬಡಿಕೆಗೆ ಇಂದು ಸಹಿ ಹಾಕಲಾಯಿತು.
ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್, ದೀನ ದಲಿತರ ಮಕ್ಕಳಿಗೆ ಸಮಾನ ಶಿಕ್ಷಣ ನೀಡುವಲ್ಲಿ ಸರ್ಕಾರದೊಂದಿಗೆ ಸಹಭಾಗಿತ್ವ ವಹಿಸುತ್ತಿರುವ ಎಂಬೆಸ್ಸಿ ಗ್ರೂಪ್ ನ ನಿಲುವನ್ನು ಸರ್ಕಾರ ಸ್ವಾಗತ ಮಾಡಲಿದೆ. ಅಸ್ತಿತ್ವದಲ್ಲಿರುವ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಈ ಅರ್ಥಪೂರ್ಣ ಒಡಂಬಡಿಕೆಯನ್ನ ಅತ್ಯಂತ ಸಂತೋಷದಿಂದ ನವೀಕರಣ ಮಾಡುತ್ತಿದ್ದೇವೆ. ಜೊತೆಗೆ, ಈ ಒಪ್ಪಂದ ನವೀಕರಣಕ್ಕೆ ನಮ್ಮ ಜೊತೆ ಮತ್ತಷ್ಟು ಕಾರ್ಪೊರೇಟ್ ಸಂಸ್ಥೆಗಳು ಕೈಜೋಡಿಸಲು ಉತ್ತೇಜನ ನೀಡಲಿದೆ ಎನ್ನುವ ನಿರೀಕ್ಷೆ ಮೂಡಿಸಿದೆ ಎಂದರು.
ಎಂಬೆಸ್ಸಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಜಿತು ವಿರ್ವಾನಿ ಮಾತನಾಡಿ, ಒಡಂಬಡಿಕೆಯಡಿಯಲ್ಲಿ ನಾವು ಸ್ಟಾರ್ಟರ್ ಕಿಟ್ ವಿತರಣೆ, ಗಣಿತ, ಜೀವನ ಕೌಶಲ್ಯ, ಕ್ರೀಡೆ, ಇ-ತರಗತಿ ಕೊಠಡಿಗಳು, ವಿದ್ಯಾರ್ಥಿ ವೇತನ, ಶೈಕ್ಷಣಿಕ ಪ್ರವಾಸ, ಶಾಲೆಯ ನಂತರದ ಶೈಕ್ಷಣಿಕ ಬೆಂಬಲ, ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮ, ಕಲೆ ಮತ್ತು ಕರಕುಶಲ ವಸ್ತುಗಳು ಸೇರಿದಂತೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ತಿಳಿಸಿದರು.