ಬೆಂಗಳೂರು: ರಾಜ್ಯದಲ್ಲಿ ಬರದ ಛಾಯೆ ಗಾಢವಾಗಿದ್ದು, ಒಂದೆಡೆ ಜಲಾಶಯಗಳ ನೀರಿನ ಮಟ್ಟ ಇಳಿಕೆಯಾಗಿದೆ. ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ಇನ್ನೊಂದೆಡೆ ರಾಜ್ಯದ ವಿದ್ಯುತ್ ಬಳಕೆ ತಾರಕ್ಕೇರಿರುವುದು ಇಂಧನ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಬರದ ಕರಿ ನೆರಳು ದಟ್ಟವಾಗಿ ವ್ಯಾಪಿಸಿದೆ. ಮುಂಗಾರು ಮಳೆ ಕೈ ಕೊಟ್ಟಿದೆ. ವಾಡಿಕೆಯಂತೆ ಜುಲೈ ಹಾಗೂ ಆಗಸ್ಟ್ನಲ್ಲಿ ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತೆ. ಆದರೆ, ಈ ಬಾರಿ ವಾಡಿಕೆ ಮಳೆಯೂ ಕೈಕೊಟ್ಟಿದೆ. ಹೀಗಾಗಿ ರಾಜ್ಯದ ಸುಮಾರು 130ಕ್ಕೂ ಅಧಿಕ ತಾಲೂಕುಗಳು ಬರದ ಅಂಚಿನಲ್ಲಿದೆ. ಈ ಬಾರಿ ಮಳೆರಾಯ ಸಂಪೂರ್ಣ ಕೈಕೊಟ್ಟಿರುವ ಕಾರಣ ರಾಜ್ಯದ ಜಲಾಶಯಗಳು ತಳ ಮುಟ್ಟುವತ್ತ ಸಾಗಿದೆ. ಮಳೆ ಇಲ್ಲದೇ ಜಲಾಶಯಗಳಲ್ಲಿ ನೀರಿನ ಮಟ್ಟ ದಿನೇ ದಿನೆ ಕುಸಿತ ಕಾಣುತ್ತಿದೆ. ಇದರಿಂದ ಜಲ ವಿದ್ಯುತ್ ಘಟಕದಲ್ಲಿ ವಿದ್ಯುತ್ ಉತ್ಪಾದನೆಯೂ ಕುಂಟಿತವಾಗುತ್ತಿದೆ. ಉತ್ಪಾದನೆ, ಬೇಡಿಕೆ, ಬಳಕೆ ಮಧ್ಯೆ ಸಮತೋಲನ ಸಾಧಿಸಲು ಈಗಾಗಲೇ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ಕಡಿತ ಪ್ರಾರಂಭವಾಗಿದೆ.
100 ಮಿಲಿಯನ್ ಯೂನಿಟ್ನಷ್ಟು ಜಿಗಿತ ಕಂಡ ವಿದ್ಯುತ್ ಬಳಕೆ: ರಾಜ್ಯ ಮಳೆಯ ಕೊರತೆಯಿಂದ ಬರದತ್ತ ಸಾಗುತ್ತಿದೆ. ಮಳೆಗಾಲದಲ್ಲೇ ರಾಜ್ಯದಲ್ಲಿ ತಾಪಮಾನ ಗಗನಕ್ಕೇರಿದೆ. ಹೀಗಾಗಿ ರಾಜ್ಯದಲ್ಲಿ ಈ ಬಾರಿ ಹೆಚ್ಚು ಪ್ರಮಾಣದ ವಿದ್ಯುತ್ ಬಳಕೆಯಲ್ಲಿ ಜಿಗಿತವಾಗಿದೆ. ಇದು ಇಂಧನ ಇಲಾಖೆಗೆ ಇದೀಗ ತಲೆನೋವಾಗಿ ಪರಿಣಮಿಸಿದೆ. ಮಳೆ ಕೊರತೆಯ ಹಿನ್ನೆಲೆ ರೈತರ ಪಂಪ್ ಸೆಟ್ ಬಳಕೆ, ಗೃಹ ಬಳಕೆಯ ವಿದ್ಯುತ್ ಪ್ರಮಾಣದಲ್ಲಿ ಜಿಗಿತ ಕಂಡಿದೆ. ರಾಜ್ಯದ ಗರಿಷ್ಠ ವಿದ್ಯುತ್ ಬೇಡಿಕೆ ಸುಮಾರು 14,500 ಮೆಗಾ ವ್ಯಾಟ್ಗೂ ಅಧಿಕ ಇದೆ. ಈ ವಿದ್ಯುತ್ ಬಳಕೆಯ ಪ್ರಮಾಣ ದಿನೇ ದಿನೆ ಏರಿಕೆ ಕಾಣುತ್ತಲೇ ಇದೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಆಗಸ್ಟ್ 27ರವರೆಗೆ ರಾಜ್ಯದ ವಿದ್ಯುತ್ ಬಳಕೆಯಲ್ಲಿ ಬರೋಬ್ಬರಿ 100 ಮಿಲಿಯನ್ ಯೂನಿಟ್ ಹೆಚ್ಚಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ರಾಜ್ಯದ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಆದರೆ, ಈ ಬಾರಿ ಮಳೆಗಾಲದಲ್ಲೂ ವಿದ್ಯುತ್ ಬಳಕೆ ಪ್ರಮಾಣ ತಾರಕಕ್ಕೇರಿದೆ. ವಿದ್ಯುತ್ ಇಲಾಖೆ ನೀಡುವ ನಿತ್ಯ ವಿದ್ಯುತ್ ಉತ್ಪಾದನೆ, ಬಳಕೆಯ ಅಂಕಿ - ಅಂಶದಂತೆ ಈ ಆಗಸ್ಟ್ 27ರಂದು ರಾಜ್ಯದಲ್ಲಿ 271 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಕಳೆದ ಬಾರಿ ಇದೇ ಅವಧಿಗೆ ಆಗಿರುವ ವಿದ್ಯುತ್ ಬಳಕೆ 171 ದಶಲಕ್ಷ ಯೂನಿಟ್. ಅಂದರೆ, ಈ ಬಾರಿ ಬರೋಬ್ಬರಿ 100 ದಶಲಕ್ಷ ಯುನಿಟ್ನಷ್ಟು ವಿದ್ಯುತ್ ಬಳಕೆಯಲ್ಲಿ ಭಾರಿ ಏರಿಕೆಯಾಗಿದೆ.
ಜಲವಿದ್ಯುತ್ ಘಟಕದಲ್ಲಿ ಕುಸಿತ ಕಂಡ ಉತ್ಪಾದನೆ: ಮಳೆ ಅಭಾವದಿಂದ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಭಾರಿ ಕುಸಿತ ಕಂಡಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಜಲ ಘಟಕಗಳಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಈ ಬಾರಿ ನೀರಿನ ಮಟ್ಟ ಭಾರಿ ಕುಸಿತ ಕಂಡಿರುವುದರಿಂದ ಜಲ ವಿದ್ಯುತ್ ಘಟಕಗಳಲ್ಲೂ ವಿದ್ಯುತ್ ಉತ್ಪಾದನೆ ಕಳೆದ ಬಾರಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಇಂಧನ ಇಲಾಖೆಯ ವಿದ್ಯುತ್ ಉತ್ಪಾದನೆ ಸ್ಥಿತಿಗತಿಯ ಅಂಕಿ - ಅಂಶದಂತೆ ಈ ಬಾರಿ ಆ.27ಕ್ಕೆ ಮೂರು ಪ್ರಮುಖ ಜಲಾಶಯಗಳಾದ ಶರಾವತಿ, ವಾರಾಹಿ ಮತ್ತು ಎನ್ಪಿಹೆಚ್ ಜಲ ವಿದ್ಯುತ್ ಘಟಕದಿಂದ ಒಟ್ಟು 21.94 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಈ ಪ್ರಮುಖ ಜಲ ವಿದ್ಯುತ್ ಘಟಕಗಳಿಂದ 26.02 ಮಿ.ಯು. ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. ಅದೇ ರೀತಿ ಇತರ ಸಣ್ಣ ಜಲ ವಿದ್ಯುತ್ ಘಟಕಗಳಿಂದ ಆ.27ಕ್ಕೆ 7.40 ಮಿ.ಯು. ವಿದ್ಯುತ್ ಉತ್ಪಾದಿಸಿದರೆ, ಕಳೆದ ವರ್ಷ ಇದೇ ದಿನ ಒಟ್ಟು 15.70 ಮಿ.ಯು. ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು.
ಅಂದರೆ, ಈ ಬಾರಿ ಆ.27ರಂದು ರಾಜ್ಯ ಎಲ್ಲ ಜಲ ವಿದ್ಯುತ್ ಘಟಕಗಳಿಂದ 29.34 ಮಿ.ಯು. ವಿದ್ಯುತ್ ಉತ್ಪಾದನೆ ಆಗಿದ್ದರೆ, ಕಳೆದ ವರ್ಷ ಇದೇ ದಿನ 41.73 ಮಿ.ಯು. ವಿದ್ಯುತ್ ಉತ್ಪಾದನೆಯಾಗಿತ್ತು. ಅಂದರೆ, ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ ಜಲ ವಿದ್ಯುತ್ ಘಟಕಗಳಿಂದ ಸುಮಾರು 12.40 ಮಿ.ಯು. ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ವಿದ್ಯತ್ ಬಳಕೆ ಕಳೆದ ಬಾರಿಗಿಂತ ಈ ಅವಧಿಗೆ 100 ಮಿ.ಯು. ಅಧಿಕವಾಗಿದ್ದರೆ, ಇತ್ತ ಜಲ ವಿದ್ಯುತ್ ಘಟಕಗಳ ಉತ್ಪಾದನೆ ಕುಸಿತ ಕಂಡಿರುವುದು ಇಂಧನ ಇಲಾಖೆಗೆ ತಲೆನೋವು ತರಿಸಿದೆ.
ಮೂರು ಪ್ರಮುಖ ಜಲಾಶಯಗಳಲ್ಲಿ ಈ ವರ್ಷ ಸುಮಾರು 4,131 ಮಿ.ಯು. (48%) ಪ್ರಮಾಣದಲ್ಲಿ ವಿದ್ಯುತ್ ಲಭ್ಯವಿದೆ. ಅದೇ ಕಳೆದ ವರ್ಷ 6,734 ಮಿ.ಯು. (77.50%) ವಿದ್ಯುತ್ ಲಭ್ಯತೆ ಇತ್ತು. ಜೂನ್ 2024ರ ವರೆಗೆ ನಿತ್ಯ 13.59 ಮಿ.ಯು. ವಿದ್ಯುತ್ ಲಭ್ಯತೆ ಇದ್ದರೆ, ಅದೇ ಕಳೆದ ವರ್ಷ 21.93 ಮಿ.ಯು. ಲಭ್ಯತೆ ಇತ್ತು ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.
ಕಲ್ಲಿದ್ದಲು ವಿದ್ಯುತ್ ಘಟಕಗಳ ಉತ್ಪಾದನೆಯೂ ಕಡಿತ: ಇನ್ನು ರಾಜ್ಯದ ಪ್ರಮುಖ ವಿದ್ಯುತ್ ಮೂಲವಾದ ಕಲ್ಲಿದ್ದಲು ವಿದ್ಯುತ್ ಘಟಕಗಳಿಂದಲೂ ಉತ್ಪಾದನೆ ಕುಂಠಿತವಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ರಾಯಚೂರಿನ ಆರ್ ಟಿಪಿಎಸ್ನ 8 ಘಟಕಗಳ ಪೈಕಿ ಕೇವಲ 4 ಘಟಕಗಳಿಂದ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಉಳಿದ ನಾಲ್ಕು ಘಟಕಗಳು ತಾಂತ್ರಿಕ ಕಾರಣ ಹಾಗೂ ದುರಸ್ತಿ ಕಾರ್ಯಗಳಿಂದ ಸ್ಥಗಿತವಾಗಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ. ಆರ್.ಟಿ.ಪಿ.ಎಸ್ನಿಂದ ಆಗಸ್ಟ್ 27ರಂದು ಕೇವಲ 9.31 ಮಿ.ಯು. ಮಾತ್ರ ವಿದ್ಯುತ್ ಉತ್ಪಾದನೆಯಾಗಿದೆ.
ಇನ್ನೂ ಬಳ್ಳಾರಿ ಕಲ್ಲಿದ್ದಲು ವಿದ್ಯುತ್ ಘಟಕದ ಮೂರೂ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಆ.27ರಂದು 19.24 ಮಿ.ಯು. ಉತ್ಪಾದನೆ ಮಾಡಲಾಗಿದೆ. ಅದೇ ಯರಮರಸ್ ಘಟಕದ ಎರಡೂ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 13.70 ಮಿ.ಯು. ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಜಲ ಬಿದ್ಯುತ್ ಘಟಕಳ ಉತ್ಪಾದನೆ ಕಡಿಮೆಯಾಗಿರುವುದರಿಂದ ಕಲ್ಲಿದ್ದಲು ವಿದ್ಯುತ್ ಘಟಕಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಆದರೆ, ಕಲ್ಲಿದ್ದಲು ಕೊರತೆ, ತಾಂತ್ರಿಕ ಕಾರಣಗಳಿಂದ ಸಂಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ ಅದಾನಿ ಸಮೂಹ ಸಂಸ್ಥೆ ಒಡೆತನದ ಉಡುಪಿ ಕಲ್ಲಿದ್ದಲು ವಿದ್ಯುತ್ ಘಟಕದಿಂದ ಭಾನುವಾರದಂದು 12 ಮಿ.ಯು. ವಿದ್ಯುತ್ ಉತ್ಪಾದನೆಯಾಗಿದೆ. ಉಳಿದಂತೆ ಅಸಂಪ್ರದಾಯಿಕ ವಿದ್ಯುತ್ ಮೂಲಗಳಿಂದ ಸುಮಾರು 90 ಮಿ.ಯು. ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ಪೈಕಿ ಸೋಲಾರ್ ಘಟಕಗಳಿಂದ 43.88 ಮಿ.ಯು. ಹಾಗೂ ವಿಂಡ್ ಘಟಕಗಳಿಂದ ಸುಮಾರು 39.46 ಮಿ.ಯು. ಉತ್ಪಾದನೆ ಮಾಡಿ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸುವ ಪ್ರಯತ್ನ ಪಡಲಾಗುತ್ತಿದೆ.
ವಿದ್ಯುತ್ ಖರೀದಿಯ ಅನಿವಾರ್ಯತೆ: ಬರ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ಬಾರಿ ಇಂಧನ ಇಲಾಖೆ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಹೆಚ್ಚಿನ ವಿದ್ಯುತ್ ಖರೀದಿ ಅನಿವಾರ್ಯ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ. ಇಂಧನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈವರೆಗೆ ದಾಮೋದರ್ ವ್ಯಾಲಿ ನಿಗಮದಿಂದ ರಾಜ್ಯ ಸುಮಾರು 199 ಮಿ.ಯು. ವಿದ್ಯುತ್ ಖರೀದಿ ಮಾಡಿದೆ. ಉಡುಪಿ ಥರ್ಮಲ್ ಪವರ್ ಲಿ.ನಿಂದ 294.30 ಮಿ.ಯು. ವಿದ್ಯುತ್ ಖರೀದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬರ ಹಿನ್ನೆಲೆ ರಾಜ್ಯದ ಉತ್ಪಾದನೆ ಕುಸಿಯುತ್ತಿರುವುದರಿಂದ ಉಲ್ಬಣಿಸುತ್ತಿರುವ ವಿದ್ಯುತ್ ಬೇಡಿಕೆ ಈಡೇರಿಸಲು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಖರೀದಿ ಅನಿವಾರ್ಯ ಎಂದು ಇಂಧನ ಇಲಾಖೆ ಒಪ್ಪಿಕೊಂಡಿದೆ.
ಇದನ್ನೂ ಓದಿ: ಕೋವಿಡ್ ಅಕ್ರಮ ತನಿಖೆಗೆ ಆಯೋಗ ರಚನೆ ಹಿಂದೆ ದುರುದ್ದೇಶವಿದೆ: ಮಾಜಿ ಸಚಿವ ಸುಧಾಕರ್ ಕಿಡಿ