ಬೆಂಗಳೂರು: ವರುಣನ ರೌದ್ರ ನರ್ತನ, ಕೊರೊನಾ ಭೀತಿಯಿಂದಾಗಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಷ್ಟೊಂದು ವೇಗ ಪಡೆದುಕೊಂಡಿಲ್ಲ. ಭಾರಿ ಮಳೆಯಿಂದ ಕಲಬುರ್ಗಿ, ಕೊಪ್ಪಳ, ರಾಯಚೂರು ಮತ್ತಿತರ ಕಡೆ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಮೇಲ್ಮನೆ ಚುನಾವಣೆ ಕಾವು ಮಂದಗತಿಯಲ್ಲಿ ಸಾಗುತ್ತಿದೆ. ಮತದಾರರು ಅಷ್ಟಾಗಿ ಉತ್ಸಾಹ ತೋರುತ್ತಿಲ್ಲ. ಆದರೂ, ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಕಲ್ಯಾಣ ಕರ್ನಾಟಕದ ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಈ ಅರು ಜಿಲ್ಲೆಗಳನ್ನು ಒಳಗೊಂಡಿರುವ ದೊಡ್ಡ ಕ್ಷೇತ್ರವಾಗಿದೆ. ಈ ಕ್ಷೇತ್ರ ಹಿಂದೆ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದರೂ, ವಿಧಾನ ಪರಿಷತ್ ಕ್ಷೇತ್ರ ಮಾತ್ರ ಬಿಜೆಪಿ ಅಭ್ಯರ್ಥಿಯೇ ಗೆದ್ದಿದ್ದೇ ಹೆಚ್ಚು. ಬಿಜೆಪಿಯ ಶಶೀಲ್ ನಮೋಶಿ ಅವರು ಸತತ ಮೂರು ಬಾರಿ ಗೆಲುವು ಸಾಧಿಸಿದ್ದರು. ನಂತರ ಡಾ.ಎ.ಬಿ. ಮಾಲಕರಡ್ಡಿ ಕಾಂಗ್ರೆಸ್ ನಿಂದ ಗೆದ್ದಿದ್ದರು. 2014ರ ಚುನಾವಣೆಯಲ್ಲಿ ಶರಣಪ್ಪ ಮಟ್ಟೂರ ಅವರು ಗೆಲುವು ಕಂಡರು.
ಇದೀಗ ಕಾಂಗ್ರೆಸ್-ಬಿಜೆಪಿಗೆ ಎದುರಾಳಿಯಾಗಿ ಉಪನ್ಯಾಸಕರಾಗಿದ್ದ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಜೆಡಿಎಸ್ ನಿಂದ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಇದೀಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂತಲೇ ಹೇಳಬಹುದು.
ಈ ಹಿಂದೆ ನಡೆದ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಕಾಂಗ್ರೆಸ್ ನಾಯಕರು ಎಲ್ಲರೂ ಒಟ್ಟಾಗಿ ಸೇರಿ ಚುನಾವಣೆ ಎದುರಿಸಿದ್ದರು. ಹಾಗಾಗಿ, ಬಿಜೆಪಿಯ ಶಶೀಲ್ ನಮೋಶಿ ಅವರಿಗೆ ಆಡಳಿತ ವಿರೋಧಿ ಅಲೆ ಜೋರಾಗಿತ್ತು. ಇದರಿಂದಾಗಿ ಶರಣಪ್ಪ ಮಟ್ಟೂರ ಅವರು ಗೆಲುವು ಸಾಧಿಸಲು ಸಾಧ್ಯವಾಯಿತು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಮಟ್ಟೂರ ಅವರು ಪುನರಾಯ್ಕೆ ಬಯಸಿದ್ದರೆ, ಹಿಂದಿನ ಚುನಾವಣೆಯಲ್ಲಿ ಸೋತಿದ್ದ ನಮೋಶಿ ಅವರು ಶತಾಯಗತಾಯ ಗೆಲ್ಲಲೇಬೇಕೆಂದು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಪ್ರಚಾರದಲ್ಲಿ ಪ್ರಮುಖ ನಾಯಕರ ಗೈರು: ಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ ಅಭ್ಯರ್ಥಿಗೆ ಬಿ ಫಾರಂ ನೀಡಿದ್ದಷ್ಟೆ. ಇದುವರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಪ್ರಚಾರದಲ್ಲಿ ತೊಡಗಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಶಾಸಕರು ಮಾತ್ರ ಶರಣಪ್ಪ ಮಟ್ಟೂರ ಪರ ಪ್ರಚಾರ ನಡೆಸುತ್ತಿದ್ದಾರೆ.
ಇನ್ನೂ ಜೆಡಿಎಸ್ ನದ್ದೂ ಅದೇ ಕತೆ. ಜೆಡಿಎಸ್ನ ನಾಲ್ವರು ಶಾಸಕರಿದ್ದಾರೆ. ಆದರೆ, ಜೆಡಿಎಸ್ ಅಭ್ಯರ್ಥಿಗೆ ಸ್ಥಳೀಯ ಮಟ್ಟದಲ್ಲಿ ಸಹಕಾರ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ನಾಮಪತ್ರ ಸಲ್ಲಿಸುವ ವೇಳೆ ಹೋಗಿ ಕಾರ್ಯಕರ್ತರಿಗೆ ಮನವಿ ಮಾಡಿ ಬಂದಿದ್ದರು. ಜೆಡಿಎಸ್ ಮುಖಂಡರು ಅಷ್ಟಾಗಿ ಪ್ರಚಾರ ಮಾಡುತ್ತಿಲ್ಲ. ಹಾಗಾಗಿ, ಪುರ್ಲೆ ಉಪನ್ಯಾಸಕರ ಸಂಘದ ಸಹಕಾರ ಸಿಗುವುದೆಂಬ ವಿಶ್ವಾಸದಲ್ಲಿದ್ದಾರೆ.
ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ತುಸು ಜೋರಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಸ್ಥಳೀಯ ನಾಯಕರು ಸಾಥ್ ನೀಡುತ್ತಿದ್ದಾರೆ. ವಿಧಾನಪರಿಷತ್ ಚುನಾವಣೆಗೆ ಆಸಕ್ತಿ ಕಡಿಮೆಯಾಗಲು ಮುಖ್ಯ ಕಾರಣ, ಆರ್.ಆರ್.ನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣೆ. ಮೂರು ಪಕ್ಷಗಳ ನಾಯಕರು ಪ್ರತಿಷ್ಠೆಯಾಗಿ ಪರಿಗಣಿಸಿರುವುದರಿಂದ ವಿಧಾನಪರಿಷತ್ ನ ನಾಲ್ಕು ಕ್ಷೇತ್ರಗಳ ಚುನಾವಣಾ ಪ್ರಚಾರದ ಕಡೆ ಮೂರು ಪಕ್ಷಗಳ ನಾಯಕರು ಅಷ್ಟಾಗಿ ಗಮನ ಕೊಡುತ್ತಿಲ್ಲ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು.
ಕ್ಷೇತ್ರದ ವ್ಯಾಪ್ತಿ: ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ 5 ಲೋಕಸಭಾ ಕ್ಷೇತ್ರಗಳು, ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳು ಒಳಗೊಂಡಿದೆ. ಬಿಜೆಪಿ 18 ಶಾಸಕರಿದ್ದು, ಕಾಂಗ್ರೆಸ್ ನಿಂದ 19 ಶಾಸಕರಿದ್ದಾರೆ. ನಾಲ್ವರು ಜೆಡಿಎಸ್ ಶಾಸಕರಿದ್ದಾರೆ. ವಿಧಾನಸಭೆಯ ಎರಡು ಕ್ಷೇತ್ರ ಖಾಲಿ ಇದೆ.
ಮತದಾರರೆಷ್ಟು?: ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 29,330 ಮತದಾರರಿದ್ದು, 19,002 ಪುರುಷರು, 10,326 ಮಹಿಳೆಯರು ಮತ್ತು ಇಬ್ಬರು ಇತರೆ ಮತದಾರರಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು : ಶಶೀಲ್ ನಮೋಶಿ ( ಬಿಜೆಪಿ), ಶರಣಪ್ಪ ಮಟ್ಟೂರ (ಕಾಂಗ್ರೆಸ್), ತಿಮ್ಮಯ್ಯ ಪುರ್ಲೆ (ಜೆಡಿಎಸ್), ವಾಟಾಳ್ ನಾಗರಾಜ್ ( ಕನ್ನಡ ಚಳವಳಿ ವಾಟಾಳ್ ಪಕ್ಷ), ಡಾ. ಚಂದ್ರಕಾಂತ ಸಿಂಗೆ (ಪಕ್ಷೇತರ).