ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮೇ 10ರಂದು ನಡೆಯುತ್ತಿದ್ದು, ಈ ಚುನಾವಣೆ ಕೇವಲ ಒಬ್ಬ ವ್ಯಕ್ತಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲ. ಇದು ಕರ್ನಾಟಕ ರಾಜ್ಯದ 6.50 ಕೋಟಿ ಜನರಿಗಾಗಿ ನಡೆಯುತ್ತಿರುವ ಚುನಾವಣೆ. ಇದು ದೇಶ ಹಾಗೂ ನಾಡಿನ ಮಕ್ಕಳ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆ ಎಂದು ಕೇಂದ್ರದ ಮಾಜಿ ಸಚಿವ ಮನೀಶ್ ತಿವಾರಿ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೇ 10ರಂದು ಪ್ರತಿ ಮತದಾರರು ಮತದಾನ ಮಾಡಲು ಹೋಗುವಾಗ ತಮ್ಮನ್ನು ತಾವು ಒಂದು ಪ್ರಶ್ನೆ ಕೇಳಿಕೊಳ್ಳಬೇಕು. ಮತದಾರ ಕಳೆದ ನಾಲ್ಕು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತ ತೃಪ್ತಿ ತಂದಿದೆಯೇ ಎಂಬ ಪ್ರಶ್ನೆ ಕೇಳಿಕೊಳ್ಳಬೇಕು. ಬಿಜೆಪಿ ಟ್ರ್ಯಾಕ್ ರೆಕಾರ್ಡ್ ನೋಡಿದರೆ ವಿವಿಧ ರಾಜ್ಯಗಳಲ್ಲಿ ಅವರು ಒಂದು ಚುನಾವಣೆಯನ್ನು ತಮ್ಮ ಸಾಧನೆಯ ಮೇಲೆ ಮಾಡಿಲ್ಲ.
ಹೀಗಾಗಿ ಅವರು ಉದ್ದೇಶಪೂರ್ವಕವಾಗಿ ಭಾವನಾತ್ಮಕ ವಿಚಾರವನ್ನು ಎಳೆದು ತರುತ್ತಾರೆ. ಕರ್ನಾಟಕದ ಜನರು ಬಿಜೆಪಿಯ ಸುಳ್ಳಿನ ಸದ್ದು ಹಾಗೂ ವಾಸ್ತವದ ಸತ್ಯಾಂಶಗಳ ನಡುವೆ ವ್ಯತ್ಯಾಸ ಕಂಡುಕೊಳ್ಳಬೇಕು. ಈ ಚುನಾವಣೆಯಲ್ಲಿ ರಾಜ್ಯದ ಭವಿಷ್ಯದ ಪ್ರಶ್ನೆಯಾಗಿರುವ ವಿಚಾರಗಳ ಬಗ್ಗೆ ಆಲೋಚಿಸಬೇಕು. ಹಣದುಬ್ಬರದ ಮೂಲಕ ಬಿಜೆಪಿ ರಾಜ್ಯದ ಜನರ ಆರ್ಥಿಕತೆಯ ಬೆನ್ನೆಲುಬು ಮುರಿದಿದೆ. ಬೆಲೆ ಏರಿಕೆಯಿಂದ ಪ್ರತಿ ಸಂಸಾರದ ವೆಚ್ಚದ ಮೊತ್ತ ಏರಿಕೆಯಾಗಿದೆ ಎಂದು ಮನೀಶ್ ತಿವಾರಿ ವಿವರಿಸಿದರು.
ಬೆಲೆ ಏರಿಕೆ ಮಾಡಿದ ಸರ್ಕಾರ ಬಿಜೆಪಿ : 2014ರಲ್ಲಿ ಅಡುಗೆ ಅನಿಲ 410 ರೂ. ಇತ್ತು, ಆದರೇ ಇಂದು ಅದು 1100 ಆಗಿದೆ. ಪೆಟ್ರೋಲ್ 71ರೂ ಇತ್ತು (ಕಚ್ಚಾತೈಲ ಬೆಲೆ ಗರಿಷ್ಠಮಟ್ಟದಲ್ಲಿತ್ತು) ಈಗ ಪೆಟ್ರೋಲ್ 101 ರೂ. ಆಗಿದೆ (ಕಚ್ಚಾತೈಲ ಬೆಲೆ ಕನಿಷ್ಠ ಮಟ್ಟದಲ್ಲಿರುವಾಗ), ಕೇಂದ್ರ ಸರ್ಕಾರ 27 ಲಕ್ಷ ಕೋಟಿ ಹಣವನ್ನು ಕೇವಲ ಪೆಟ್ರೋಲ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕದಿಂದ ಕೇಂದ್ರ ವಸೂಲಿ ಮಾಡಿದೆ.
ಇನ್ನು ಡೀಸೆಲ್ ಪ್ರತಿ ಲೀಟರ್ 57 ಇತ್ತು, ಈಗ 90 ರೂ. ಆಗಿದೆ. ತೊಗರಿ ಬೇಳೆ 65ರಿಂದ 150ಕ್ಕೆ ಏರಿದೆ, ಜೋಳ 36ರಿಂದ 70ಕ್ಕೆ ಏರಿಕೆಯಾಗಿದೆ. ಇನ್ನು ನಿರುದ್ಯೋಗದ ಬಗ್ಗೆ ಮಾತನಾಡುವುದಾದರೆ, ಕರ್ನಾಟಕದಲ್ಲಿ 25ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ. ರಾಜ್ಯದ 7 ಕೋಟಿ ಜನರಲ್ಲಿ 15-29 ವಯೋಮಾನದವರು 2.20 ಕೋಟಿಯಷ್ಟು ಜನರಿದ್ದಾರೆ. ಹೀಗಾಗಿ ರಾಜ್ಯದ ಭವಿಷ್ಯದ ಬಗ್ಗೆ ಮಾತನಾಡುವುದಾದರೆ, ಈ ಯುವಕರಿಗೆ ಉದ್ಯೋಗ ಸೃಷ್ಟಿಸದೇ ರಾಜ್ಯದ ಭವಿಷ್ಯವನ್ನು ಹೇಗೆ ತೀರ್ಮಾನಿಸಲಾಗುತ್ತದೆ? ಎಂದು ಮನೀಶ್ ತಿವಾರಿ ಪ್ರಶ್ನಿಸಿದರು.
ಡಬಲ್ ಇಂಜಿನ್ ಅಭಿವೃದ್ಧಿ ಏನು? : ಬಿಜೆಪಿ ಸರ್ಕಾರ 1 ಲಕ್ಷವರೆಗಿನ ರೈತರ ಸಾಲ ಮನ್ನಾ ಮಾಡುವುದಾಗಿ ತಿಳಿಸಿತ್ತು. ಅಲ್ಲದೆ ಅವರು ಬೆಂಬಲ ಬೆಲೆ ಏರಿಕೆ ಮಾಡುವ ಭರವಸೆ ನೀಡಿತ್ತು. ಈ ಭರವಸೆಗಳು ಏನಾದವು? ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡುವುದಾದರೆ ರಾಜ್ಯದ ಕೋಟ್ಯಂತರ ರೈತರಿಗೆ ನೀಡಲಾಗಿದ್ದ ಭರವಸೆಗಳು ಏನಾದವು? ಇನ್ನು ಬಿಜೆಪಿ ಸರ್ಕಾರ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ಡಬಲ್ ಇಂಜಿನ್ ಸರ್ಕಾರ ರಾಜ್ಯಕ್ಕೆ ನೀಡಿರುವ ಕೊಡುಗೆ ಏನು? ಬಿಜೆಪಿ ಹಣಕಾಸು ಆಯೋಗದ ಶಿಫಾರಸಿನ ಹೊರತಾಗಿಯೂ ರಾಜ್ಯಕ್ಕೆ ನೀಡಬೇಕಾಗಿದ್ದ ಅನುದಾನವನ್ನು ಶೇ 4.27ರಿಂದ ಶೇ 3.64ರಷ್ಟಕ್ಕೆ ಕಡಿಮೆ ಮಾಡಿದೆ. ಇದೇನಾ ಬಿಜೆಪಿ ಹೇಳುವ ಡಬಲ್ ಇಂಜಿನ್ ಅಭಿವೃದ್ಧಿ? ಎಂದು ಮನೀಶ್ ತಿವಾರಿ ಕೇಳಿದರು.
ಓಲೈಕೆ ರಾಜಕಾರಣ, ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರ : ಕಾಂಗ್ರೆಸ್ ಪಕ್ಷ ಎಸ್ಡಿಪಿಐ ನಿಯಂತ್ರಣದಲ್ಲಿದ್ದು ಹೀಗಾಗಿ ಓಲೈಕೆ ರಾಜಕಾರಣ ಮಾಡುತ್ತಿದೆ ಎಂಬ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಬೊಮ್ಮಾಯಿ ಅವರು ಹಾಲಿ ಮುಖ್ಯಮಂತ್ರಿಗಳಾಗಿದ್ದು, ಅವರು ತಮ್ಮ ಸಾಧನೆಯ ಪಟ್ಟಿ ಮುಂದಿಟ್ಟು ಯಾಕೆ ಚುನಾವಣೆ ಮಾಡುತ್ತಿಲ್ಲ? ನಾನು ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಚುನಾವಣೆ ಎರಿಸುತ್ತಿದ್ದರೆ, ನಾನು ಜನರ ಮುಂದೆ ಹೋಗಿ ನನ್ನ ಸಾಧನೆ ಬಗ್ಗೆ ಜನರಿಗೆ ತಿಳಿಸಿ ಮತ ಕೇಳುತ್ತಿದ್ದೆ. ಈ ರೀತಿ ಏರುಧ್ವನಿಯಲ್ಲಿ ಅನಗತ್ಯ ವಿಚಾರಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ಇಲ್ಲಿ ವಾಸ್ತವಾಂಶ ಎಂದರೆ ಬಿಜೆಪಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ವಿಷಯಾಂತರ ಮಾಡಿ ಗೊಂದಲ ಸೃಷ್ಟಿಸುತ್ತಿರಲಿಲ್ಲ. ಬಿಜೆಪಿ ಸರ್ಕಾರ ಸೋಲಿನ ಭೀತಿಯಿಂದ ಈ ಚುನಾವಣೆಯನ್ನು ತಮ್ಮ ಸಾಧನೆಯ ಹಾದಿ ಮೇಲೆ ನಡೆಸುತ್ತಿಲ್ಲ ಎಂದು ಮನೀಶ್ ತಿವಾರಿ ತಿಳಿಸಿದರು.
ಹನುಮಾನ್ ಚಾಲೀಸ್ ಪಠಣೆ ವಿಚಾರ : ಬಿಜೆಪಿ ಹಾಗೂ ಕೆಲ ಸಂಘಟನೆಗಳು ಹನುಮಾನ್ ಚಾಲೀಸ ಪಠಣೆ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾವು ದಿನಕ್ಕೆ ಎರಡು ಬಾರಿ ಹನುಮ ಚಾಲೀಸವನ್ನು ಕೇಳುತ್ತೇವೆ. ಅವರು ಇವತ್ತು ಮಾತ್ರ ಮಾಡುತ್ತಿದ್ದಾರೆ. ನಮ್ಮ ಧರ್ಮಗಳ ಆಚರಣೆ ರಾಜಕಾರಣದ ಭಾಗವಾಗುವುದಿಲ್ಲ. ಈ ಆಚರಣೆ ಹೃದಯದಿಂದ ಬರುತ್ತದೆ. ಇದೇ ಕಾರಣಕ್ಕೆ ನಾವು ಪ್ರತಿನಿತ್ಯ ಹನುಮ ಚಾಲೀಸ್ ಕೇಳುತ್ತೇವೆ. ಆದರೆ ಇವರು ರಾಜಕೀಯ ಉದ್ದೇಶದಿಂದ ಇದನ್ನು ಮಾಡುತ್ತಾರೆ. ಹೀಗಾಗಿ ಇಂದು ಪಠಣೆಗೆ ಮುಂದಾಗಿದ್ದಾರೆ ಎಂದು ಮನೀಶ್ ತಿವಾರಿ ತಿರುಗೇಟು ನೀಡಿದರು.
ಇದನ್ನೂ ಓದಿ : ಬಜರಂಗದಳ ನಿಷೇಧ ಯಾರಿಂದಲೂ ಸಾಧ್ಯವಿಲ್ಲ: ಕಾಂಗ್ರೆಸ್ ವಿರುದ್ಧ ಬಿಎಸ್ ಯಡಿಯೂರಪ್ಪ ಕಿಡಿ