ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಪರಿಷ್ಕರಣೆಗಾಗಿ ಮಾಹಿತಿ ಸಂಗ್ರಹ ಪ್ರಕರಣ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಅವರನ್ನು ಅಮಾನತುಗೊಳಿಸಲು ಭಾರತೀಯ ಚುನಾವಣೆ ಆಯೋಗ ಸೂಚನೆ ನೀಡಿದೆ. ಚುನಾವಣಾ ಆಯೋಗವು ಪ್ರಕರಣ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಖಡಕ್ ನಿರ್ದೇಶನಗಳನ್ನು ನೀಡಿದೆ.
ಶಿವಾಜಿನಗರ ಹಾಗೂ ಚಿಕ್ಕಪೇಟೆ ಕ್ಷೇತ್ರದ ಉಸ್ತುವಾರಿಯಾಗಿದ್ದ ಬಿಬಿಎಂಪಿ (ಕೇಂದ್ರ) ಅಪರ ಜಿಲ್ಲಾ ಚುನಾವಣಾಧಿಕಾರಿ ಎಸ್.ರಂಗಪ್ಪ ಮತ್ತು ಮಹದೇವಪುರ ಕ್ಷೇತ್ರದ ಉಸ್ತುವಾರಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಕೆ.ಶ್ರೀನಿವಾಸ್ ಅವರನ್ನು ಕೂಡಲೇ ಅಮಾನತುಗೊಳಿಸಲು ಸೂಚನೆ ನೀಡಿದೆ. ಜೊತೆಗೆ ಈ ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಲು ನಿರ್ದೇಶಿಸಿದೆ.
ಶಿವಾಜಿನಗರ, ಚಿಕ್ಕಪೇಟೆ, ಮಹದೇಪುರ ಕ್ಷೇತ್ರದಲ್ಲಿನ ಮತಪಟ್ಟಿಯಲ್ಲಿನ ಸೇರ್ಪಡೆ ಹಾಗೂ ಡಿಲೀಟ್ ಬಗ್ಗೆ 100% ತಪಾಸಣೆ ಮಾಡಲು ಸೂಚನೆ ನೀಡಿದೆ. ಈ ಮೂರು ಕ್ಷೇತ್ರಗಳಲ್ಲಿ ಮತಪರಿಷ್ಕರಣಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಡಿ.24ರವರೆಗೆ ಇನ್ನೂ 15 ದಿನಗಳ ಕಾಲ ಅವಧಿ ವಿಸ್ತರಣೆ ಮಾಡಿ ಆದೇಶಿಸಿದೆ.
ಇನ್ನು ಮತಪರಿಷ್ಕರಣೆ ಮೇಲೆ ನಿಗಾ ಇರಿಸಲು ಮೂವರು ಐಎಎಸ್ ಅಧಿಕಾರಿಗಳ ನೇಮಕ ಮಾಡಿದೆ. ಶಿವಾಜಿನಗರ ಕ್ಷೇತ್ರಕ್ಕೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಚಿಕ್ಕಪೇಟೆ ಕ್ಷೇತ್ರಕ್ಕೆ ಡಾ.ಆರ್.ವಿಶಾಲ್, ಮಹದೇವಪುರಕ್ಕೆ ಅಜಯ್ ನಾಗಭೂಷಣ್ ಅವರನ್ನು ನೇಮಕ ಮಾಡಿದೆ. ಕಾನೂನುಬಾಹಿರವಾಗಿ ಸಂಗ್ರಹಿಸಲಾದ ಮಾಹಿತಿಯನ್ನು ನೇರವಾಗಿ, ಪರೋಕ್ಷವಾಗಿ ಬಳಸದಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಚಿಲುಮೆ ಸಂಸ್ಥೆ ರವಿಕುಮಾರ್ ಆಪ್ತನ ಮನೆ, ಕಚೇರಿಗಳ ಮೇಲೆ ಪೊಲೀಸ್ ದಾಳಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಮೂರು ಕ್ಷೇತ್ರಗಳನ್ನು ಹೊರತು ಪಡಿಸಿದ ಕ್ಷೇತ್ರಗಳಲ್ಲಿ ಮತಪಟ್ಟಿ ವೀಕ್ಷಕರಾದ ಉಜ್ವಲ್ ಘೋಷ್ (ಬಿಬಿಎಂಪಿ ಕೇಂದ್ರ), ರಾಮಚಂದ್ರನ್ (ಬಿಬಿಎಂಪಿ ಉತ್ತರ), ರಾಜೇಂದ್ರ ಚೋಳನ್ (ಬಿಬಿಎಂಪಿ ದಕ್ಷಿಣ), ಎನ್.ಮಂಜುಳಾ (ಬೆಂಗಳೂರು ನಗರ)ರನ್ನು ಮತಪರಿಷ್ಕರಣೆ ಕಾರ್ಯದ ಮೇಲುಸ್ತುವಾರಿ ವಹಿಸುವಂತೆ ನಿರ್ದೇಶಿಸಿದೆ.
ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮ್ಲನ್ ಬಿಸ್ವಾಸ್ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತಪರಿಷ್ಕರಣೆ ಕಾರ್ಯದ ಪರಿಶೀಲನೆಯ ಉಸ್ತುವಾರಿ ವಹಿಸಲು ಸೂಚನೆ ನೀಡಿದೆ. ಇದರ ಜೊತೆಗೆ ಮಾಹಿತಿ ಸಂಗ್ರಹಿಸಲಾಗಿರುವ ಆರೋಪ ಹಾಗೂ ಮತದಾರರ ಪರಿಷ್ಕರಣೆ ಜಾಗೃತಿ ಕಾರ್ಯವನ್ನು ದುರ್ಬಳಕೆ ಮಾಡಿದ ಖಾಸಗಿ ಸಂಸ್ಥೆ ವಿರುದ್ಧದ ದೂರು ಕುರಿತು ವಹಿಸಲಾಗಿರುವ ಆಡಳಿತಾತ್ಮಕ ತನಿಖೆಯನ್ನು ತ್ವರಿತಗೊಳಿಸಲು ಅವರಿಗೆ ನಿರ್ದೇಶನ ನೀಡಿದೆ.
ಎಲ್ಲಾ ಕ್ಷೇತ್ರಗಳ ಮತಪಟ್ಟಿ ಪರಿಷ್ಕರಣೆ ಅವಧಿಯಲ್ಲಿನ ಪ್ರತಿ ಪ್ರಕ್ರಿಯೆಗಳಲ್ಲಿ ನೋಂದಾಯಿತ ರಾಜಕೀಯ ಪಕ್ಷಗಳನ್ನು ಭಾಗಿದಾರರನ್ನಾಗಿಸುವಂತೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಚಿಲುಮೆ ಸಂಸ್ಥೆಗೆ ಹಣ ನೀಡಿದವರ ವಿರುದ್ಧ ಯಾಕೆ ಸಿಬಿಐ, ಐಟಿ, ಇಡಿ ದಾಳಿ ನಡೆಸಿಲ್ಲ: ಸಿದ್ದರಾಮಯ್ಯ