ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು ಮಿತಿಗೊಳಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ಭಾರತ ಚುನಾವಣಾ ಆಯೋಗ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪಕ್ಷಗಳಿಗೆ 40 ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳುವ ಅವಕಾಶ ನೀಡಿತ್ತು. ಆದರೆ, ಈ ಸಂಖ್ಯೆಯಲ್ಲಿ ಬದಲಾವಣೆ ಮಾಡಿ 30 ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಅದೇ ರೀತಿಯಲ್ಲಿ ನೋಂದಾಯಿತ ರಾಜಕೀಯ ಪಕ್ಷಗಳಿಗೆ ನೀಡಲಾಗಿದ್ದ 20 ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು 15ಕ್ಕೆ ಇಳಿಸಿ ಪರಿಷ್ಕೃತ ಆದೇಶವನ್ನು ಆಯೋಗ ಜಾರಿ ಮಾಡಿದೆ.
ರಾಜ್ಯದಲ್ಲಿ ಪ್ರಸ್ತುತ ಘೋಷಣೆಯಾಗಿರುವ ವಿಧಾನಸಭಾ ಉಪ ಚುನಾವಣೆಗಳಿಗೆ ಈ ಪರಿಷ್ಕೃತ ಆದೇಶ ಅನ್ವಯವಾಗಲಿದ್ದು, ರಾಜಕೀಯ ಪಕ್ಷಗಳು ಸ್ಟಾರ್ ಪ್ರಚಾರಕರ ಸಭೆಗಳ ಕುರಿತು ಮುಖ್ಯ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಲು ಚುನಾವಣೆ ಅಧಿಸೂಚನೆಯ ದಿನಾಂಕದಿಂದ ಒಂದು ವಾರದ ಗಡುವನ್ನು 10 ದಿನಗಳಿಗೆ ವಿಸ್ತರಿಸಲಾಗಿದೆ.
ಸ್ಟಾರ್ ಪ್ರಚಾರಕರ ಸಭೆಗಳಿಗೆ ಕನಿಷ್ಠ 48 ಗಂಟೆಗಳ ಮುಂಚೆ ರಾಜಕೀಯ ಪಕ್ಷಗಳು ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.