ಬೆಂಗಳೂರು: ರಾಜ್ಯದ ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ ಪ್ರಚಾರದ ಸಮಯವನ್ನು ಕೋವಿಡ್-19 ಕಾರಣದಿಂದ ಸಂಜೆ 7:00 ಗಂಟೆಯಿಂದ ಬೆಳಗ್ಗೆ 10:00 ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಅಲ್ಲದೇ, ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು 30.80 ಲಕ್ಷ ವೆಚ್ಚ ಮಿತಿಗೊಳಿಸಿ ಭಾರತ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಚುನಾವಣಾ ಪ್ರಚಾರ ನಡೆಸಬಹುದಾಗಿದೆ. ನೈಟ್ ಕರ್ಫ್ಯೂ ಸಮಯದ ಮಿತಿಗೂ ಮುನ್ನವೇ ಪ್ರಚಾರ ಸಭೆಗೆ ನಿರ್ಬಂಧ ವಿಧಿಸಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಇರಲಿದೆ. ನೈಟ್ ಕರ್ಫ್ಯೂ ಬೆಳಗ್ಗೆ 6 ಗಂಟೆಗೆ ತೆರವಾದರೂ ಪ್ರಚಾರ ಕಾರ್ಯಕ್ಕೆ ಮಾತ್ರ ಬೆಳಗ್ಗೆ 10 ಗಂಟೆವರೆಗೆ ನಿರ್ಬಂಧಿತ ಸಮಯವಾಗಿದೆ ಎಂದು ಆಯೋಗ ತಿಳಿಸಿದೆ.
ಚುನಾವಣಾ ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿರಬೇಕು
ಮತ ಎಣಿಕೆಯ ದಿನ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಅಧಿಕಾರಿ/ಸಿಬ್ಬಂದಿ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೋವಿಡ್-19 ನಿರೋಧಕ ಎರಡು ಲಸಿಕೆಗಳನ್ನು ಪಡೆದಿರಬೇಕು. ಅಥವಾ ಒಂದು ಲಸಿಕೆ ಪಡೆದವರು ಮತ ಎಣಿಕೆ ದಿನದ ಮುಂಚಿನ 72 ಗಂಟೆಯೊಳಗಿನ ಆರ್‌ಟಿಪಿಸಿಆರ್ ಪ್ರಮಾಣ ಪತ್ರ ಪಡೆಯಬೇಕು.
ಲಸಿಕೆ ಪಡೆಯದವರು 48 ಗಂಟೆಯೊಳಗಿನ ಆರ್‌ಟಿಪಿಸಿಆರ್ ಪ್ರಮಾಣಪತ್ರವನ್ನು ಪಡೆದು ಸಂಬಂಧಿಸಿದ ಮತ ಎಣಿಕೆ ಕೇಂದ್ರದ ಅಧಿಕಾರಿಗೆ ಸಲ್ಲಿಸಿಬೇಕು. ಅನಂತರ ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸಬಹುದು ಎಂದು ಆಯೋಗದ ಆದೇಶ ತಿಳಿಸಿದೆ.
ಪಕ್ಷಗಳ ಪ್ರತಿನಿಧಿಗಳೊಂದಿಗೆ ಚುನಾವಣಾಧಿಕಾರಿ ಸಭೆ
ಈ ಕುರಿತು ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಆಯೋಗದ ಆದೇಶಗಳ ಕುರಿತು ತಿಳಿಸಿದರು.
30.8 ಲಕ್ಷಕ್ಕೆ ಖರ್ಚು ಮಿತಿಗೊಳಿಸಿದ ಆಯೋಗ
ಪ್ರಸ್ತುತ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಅಭ್ಯರ್ಥಿಗಳ ಚುನಾವಣಾ ಒಟ್ಟು ಖರ್ಚನ್ನು 30,80,000 ರೂ.ಗಳಿಗೆ ಮಿತಿಗೊಳಿಸಿ ಆಯೋಗ ಆದೇಶ ಹೊರಡಿಸಿರುವುದನ್ನು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದರು.
ಚುನಾವಣಾ ಸಮಯದಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಓದಿ: ಇದಕ್ಕೇ ಆರ್ಎಸ್ಎಸ್ ವಿಶ್ವಕುಖ್ಯಾತಿ ಆಗಿದ್ದು: ಮಾಜಿ ಸಿಎಂ ಹೆಚ್ಡಿಕೆ ಟ್ವೀಟ್