ಬೆಂಗಳೂರು : ಕರ್ನಾಟಕ ರಾಜ್ಯದ ಮತದಾನ ರಾಯಭಾರಿ ಹಾಗೂ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೆಸರು ಮತದಾರರ ಪಟ್ಟಿಯಲ್ಲಿಲ್ಲ. ರಾಹುಲ್ ದ್ರಾವಿಡ್ ಪಕ್ಷಾತೀತವಾಗಿ ಮತದಾನ ಜಾಗೃತಿಯಲ್ಲಿ ಪಾಲ್ಗೊಂಡಿದ್ದಾರೆ.
ಆದರೆ, ಏಪ್ರಿಲ್ 18ಕ್ಕೆ ನಡೆಯುವ ಚುನಾವಣೆಯಲ್ಲಿ ರಾಹುಲ್ ದ್ರಾವಿಡ್ ಮತದಾನ ಮಾಡಲು ಸಾಧ್ಯವೇ ಇಲ್ಲ. ಯಾಕೆಂದರೆ ಮತದಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರ ಹೆಸರೇ ಇಲ್ಲ. ಜನರಲ್ಲಿ ಮತದಾನ ಜಾಗೃತಿ ಮೂಡಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ ಎಂದು ಅರಿವು ಮೂಡಿಸುತ್ತಿದ್ದ ಅವರ ಹೆಸರೇ ಪಟ್ಟಿಯಲ್ಲಿ ಇಲ್ಲದಿರುವುದು ಹಲವರನ್ನ ಹುಬ್ಬೇರುವಂತೆ ಮಾಡಿದೆ. ಕ್ರಿಕೆಟ್ ಲೆಜೆಂಡ್ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದೇ ಇರುವ ವಿಚಾರವನ್ನ ಮುಖ್ಯ ಚುನಾವಣಾಧಿಕಾರಿಯೇ ದೃಢಪಡಿಸಿದ್ದಾರೆ.
ಚುನಾವಣೆ ಪಟ್ಟಿಯಲ್ಲಿ ರಾಹುಲ್ ಹೆಸರು ಯಾಕಿಲ್ಲ?
ರಾಹುಲ್ ದ್ರಾವಿಡ್ ಹಾಗೂ ಅವರ ಪತ್ನಿ ವಿಜೇತ ಈ ಹಿಂದೆ ಇಂದಿರಾ ನಗರದ ನಿವಾಸಿಗಳಾಗಿದ್ದರು. ಆದರೆ ಅವರು ಕಳೆದ ವರ್ಷ ಆರ್.ಎಂ.ವಿ ಬಡಾವಣೆಯ ಅಶ್ವತನಗರಕ್ಕೆ ಸ್ಥಳಾಂತರಗೊಂಡ ನಂತರ ಅವರ ಹೆಸರನ್ನು ಮತ್ತಿಕೆರೆಯ ಸಬ್ ಡಿವಿಷನ್ ಕಚೇರಿಯಲ್ಲಿ ನೋಂದಾಯಿಸಬೇಕಿತ್ತು. ಆದರೆ ರಾಹುಲ್ ದ್ರಾವಿಡ್ ಹೆಸರು ನೋಂದಾಯಿಸಲು ಲಭ್ಯ ಇಲ್ಲದ ಕಾರಣ ಹಾಗೂ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳದೇ ಇರುವುದರಿಂದ ದ್ರಾವಿಡ್ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಮತದಾರ ಪಟ್ಟಿ ಪರಿಷ್ಕರಣೆ ಮಾಡುವ ವೇಳೆ, ಈ ಸಂಬಂಧಿತ ಸಿಬ್ಬಂದಿ ಇಂದ್ರಾನಗರದ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿಜೇತ ಬದಲಿಗೆ ವಿಜಯ್ ಎಂಬುವರು ಅಲ್ಲಿ ಇದ್ದರು ಎಂದು ಮಹಜರ್ ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೊಂದು ಮೂಲದ ಪ್ರಕಾರ, ಅವರ ಸಹೋದರ ಮನೆ ಬದಲಾವಣೆ ಹಿನ್ನೆಲೆಯಲ್ಲಿ ಇಂದಿರಾನಗರದ ಮತದಾರರ ಲಿಸ್ಟ್ನಿಂದ ದ್ರಾವಿಡ್ ಹೆಸರು ತೆಗೆಯುವಂತೆ ಮನವಿ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ.