ಆನೇಕಲ್: ತಾಲೂಕಿನಲ್ಲಿ ಒಂದೇ ಕುಟುಂಬದ ನಾಲ್ವರು, ಓರ್ವ ಕೊರೊನಾ ವಾರಿಯರ್ ಹಾಗೂ ಗರ್ಭಿಣಿ ಸೇರಿದಂತೆ 8 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
23 ವರ್ಷದ ಗರ್ಭಿಣಿಯು ಜಿಗಣಿ ಪುರಸಭೆ ವ್ಯಾಪ್ತಿಯ ಪಟಾಲಮ್ಮ ಬಡಾವಣೆಯಲ್ಲಿ ವಾಸವಿದ್ದರು. ಇವರಿಗೆ ತಮಿಳುನಾಡಿನ ಸಂಪರ್ಕ ಇರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿದೆ.
ಇನ್ನು ತಮಿಳುನಾಡಿನ ಮೈಕ್ರೋ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಪಾಸಿಟಿವ್ ಬಂದಿದ್ದು, ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ವಾಸವಿದ್ದ ಈತ ಇಲ್ಲಿಂದ ಹೊಸೂರಿಗೆ ಪ್ರಯಾಣ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಹಾಗೆಯೇ ಬೊಮ್ಮಸಂದ್ರ ಭಾಗದಲ್ಲಿ ಮತ್ತೊಂದು ಕೇಸ್ ಪತ್ತೆಯಾಗಿದ್ದು, ಗಾರ್ಡೇನಿಯಾ ಲೇಔಟ್ನಲ್ಲಿ ವಾಸವಿದ್ದ ವ್ಯಕ್ತಿಗೆ ಕೋವಿಡ್ ತಗುಲಿದೆ. ವ್ಯಕ್ತಿಯ ಸಂಪರ್ಕದಲ್ಲಿದ್ದ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ.
ಅಲ್ಲದೆ ಹೆಬ್ಬಗೋಡಿ ಬಳಿಯ ಸಿಂಗೇನ ಅಗ್ರಹಾರದಲ್ಲಿ ಒಂದೇ ಕುಟುಂಬದ ಗಂಡ, ಹೆಂಡತಿ, ಇಬ್ಬರು ಗಂಡು ಮಕ್ಕಳಲ್ಲಿ ವೈರಸ್ ದೃಢಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಹೆಡ್ ಕಾನ್ಸ್ಟೇಬಲ್ಗೆ ಕೊರೊನಾ:
ಸೂರ್ಯಸಿಟಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇವರು ಕಳೆದ ಹಲವು ದಿನಗಳಿಂದ ಹೆನ್ನಾಗರ ಕಂಟೈನ್ಮೆಂಟ್ ಝೋನ್, ಅತ್ತಿಬೆಲೆ ಚೆಕ್ ಪೋಸ್ಟ್ ಮತ್ತು ರಾತ್ರಿ ಪಾಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದರು ಎಂದು ತಿಳಿದು ಬಂದಿದೆ. ಸೂರ್ಯಸಿಟಿ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡುವ ಸಾಧ್ಯತೆಯಿದೆ.