ಬೆಂಗಳೂರು: ಹೆಚ್ಎಎಲ್ ಸಂಸ್ಥೆಯ ನೌಕರರು ವೇತನ ಪರಿಷ್ಕರಣೆ ಮಾಡಬೇಕೆಂದು ಇಲ್ಲಿಯವರೆಗೂ ಪ್ರತಿಭಟನೆ ಮಾಡಿದರೂ ಸಹ ಸಂಸ್ಥೆಯ ಅಧ್ಯಕ್ಷ ನಮಗೆ ಸ್ಪಂದಿಸುತ್ತಿಲ್ಲ ಎಂದು ನೌಕರರ ಸಂಘದ ಅಧ್ಯಕ್ಷ ಸೂರ್ಯದೇವ ಚಂದ್ರಶೇಖರ್ ಲಿಖಿತ ಹೇಳಿಕೆಯನ್ನು ನೀಡಿದ್ದಾರೆ.
ಹೆಚ್ಎಎಲ್ ಸಂಸ್ಥೆಯ ಎಲ್ಲಾ 9 ಯೂನಿಟ್ಗಳ ನೌಕರರು 6 ದಿನಗಳಿಂದ ನಿರಂತರವಾಗಿ ಪ್ರತಿಭಟಿಸುತ್ತಿರುವ ಪರಿಣಾಮ, ಈ ಸಂಸ್ಥೆಯ ಕಾರ್ಯದ ಮೇಲೆ ಪರಿಣಾಮ ಬೀರಿದೆ. 6 ದಿನ ಪ್ರತಿಭಟನೆ ಮಾಡಿದರೂ ಸಹ ಸಂಸ್ಥೆಯ ಅಧ್ಯಕ್ಷ ನಮಗೆ ಸ್ಪಂದಿಸುತ್ತಿಲ್ಲ. ಈ ಸಂಸ್ಥೆ ಒಂದು ಕುಟುಂಬದ ರೀತಿ. ಆದರೆ ಕುಟುಂಬದ ಮುಖ್ಯಸ್ಥ ನಮಗೆ ಸ್ಪಂದಿಸದಿರುವುದು ವಿಪರ್ಯಾಸ ಎಂದು ನೌಕರರ ಸಂಘದ ಅಧ್ಯಕ್ಷ ಸೂರ್ಯದೇವ ಚಂದ್ರಶೇಖರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹೆಚ್ಎಎಲ್ ಅಧ್ಯಕ್ಷ ಸಂಸ್ಥೆಯಲ್ಲಿ ಯಾವುದೇ ಅಡಚಣೆಯಿಲ್ಲ, ಎಂದಿನಂತೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೆ ನೀಡಿರುವುದು ಸುಳ್ಳು. ಕಾರಣ ಸಂಸ್ಥೆಯಲ್ಲಿರುವ ಅಧಿಕಾರಿಗಳು ಯಂತ್ರಗಳೊಂದಿಗೆ ಕೆಲಸ ಮಾಡುವುದಕ್ಕೆ ಬರುವುದಿಲ್ಲ, ಅವರು ಕೇವಲ ಮೇಲ್ವಿಚಾರಣೆ ಮಾಡುತ್ತಾರೆ. ನೌಕರರು ಕೆಲಸ ಮಾಡಲಿಲ್ಲ ಎಂದರೆ ಸಂಸ್ಥೆ ಗುರಿ ಮುಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ. ನಮಗೂ ಸಂಸ್ಥೆ ಈ ರೀತಿ ಆಗುವುದು ಇಷ್ಟವಿಲ್ಲ. ಆದ್ರೆ ನಮ್ಮ ಬೇಡಿಕೆಗಳು ಮುಖ್ಯ. ಹೀಗಾಗಿ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಸೂರ್ಯದೇವ ಚಂದ್ರಶೇಖರ್ ಹೇಳಿದ್ದಾರೆ.
ಸಂಸ್ಥೆಯ ಅಧಿಕಾರಿಗಳು ಸಂಸ್ಥೆಯ ಕಾರ್ಯ ಸ್ಥಗಿತಗೊಂಡಿದ್ದರೂ ಎಂದಿನಂತೆ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಉತ್ತರ ಪ್ರದೇಶದ ಹೆಚ್ಎಎಲ್ ಶಾಖೆಯಲ್ಲಿ ಇಂದು ಎಂದಿನಂತೆ ನೌಕರರು ಕೆಲಸಕ್ಕೆ ವಾಪಸಾಗಿದ್ದಾರೆ. ಹೀಗಾಗಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ನೌಕರರು ತಮ್ಮ ಕಾರ್ಯಕ್ಕೆ ಹಿಂತಿರುಗಬೇಕು ಎಂದು ಸಂಸ್ಥೆಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಒಟ್ಟಾರೆಯಾಗಿ ಗೊಂದಲಕ್ಕೀಡಾಗಿರುವ ಹೆಚ್ಎಎಲ್ ನೌಕರರ ವೇತನ ಪರಿಷ್ಕರಣೆ ಪ್ರತಿಭಟನೆ, ಹಾವು-ಮುಂಗುಸಿ ಜಗಳದ ರೀತಿ ಕಾಣುತ್ತಿದೆ.