ಬೆಂಗಳೂರು: ಉಪನ್ಯಾಸಕರು ತಮ್ಮ ರಾಜಕೀಯ ಕಾರಣಗಳಿಗಾಗಿ ವಿದ್ಯಾರ್ಥಿಗಳ ಹಿತ ಬಲಿಕೊಡುವುದು, ಸರಿಯಾದ ಕ್ರಮವಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ತುಂಬಾ ನೋವಿನಿಂದ ಈ ಕುರಿತಾಗಿ ಬರೆದುಕೊಂಡಿದ್ದಾರೆ.
ಪದವಿ ಪೂರ್ವ ಶಿಕ್ಷಣ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ (ಇದೇ ಜನವರಿ 31ರಂದು ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪಕ್ಷವೊಂದರ ಪ್ರತಿನಿಧಿಯಾಗಿ ಮೇಲ್ಮನೆ ಚುನಾವಣೆಗೆ ಸ್ಪರ್ಧಿಸಲು ಬಯಸಿರುವ) ತಿಮ್ಮಯ್ಯ ಪುರ್ಲೆ ಅವರು ತಮ್ಮ ಸಂಘಟನೆಯ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಉಪನ್ಯಾಸಕರ ಹಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮ ವಹಿಸದೇ ಇದ್ದಲ್ಲಿ, ವಿವಿಧ ಹಂತಗಳಲ್ಲಿ ಮೌಲ್ಯಮಾಪನ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಉಪನ್ಯಾಸಕರು ತಮ್ಮ ಬೇಡಿಕೆಗಳಿಗಾಗಿ ವಿದ್ಯಾರ್ಥಿಗಳ ಹಿತವನ್ನು ಒತ್ತೆ ಇಡುವುದು ಯಾರೂ ಒಪ್ಪಲಾಗದ ನಡವಳಿಕೆ. ಸಂಘಟನೆಗಳು ಪ್ರತಿಭಟನೆಗೆ ಯಾವತ್ತೂ ‘ಅಹಿಂಸಾತ್ಮಕವಾದ’ ಮಾರ್ಗವನ್ನು ಹಿಡಿಯಬೇಕು ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ತಿಮ್ಮಯ್ಯ ಪುರ್ಲೆ ಹೇಳಿರುವಂತೆ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು, ಮೌಲ್ಯಮಾಪನ ತಿರಸ್ಕರಿಸಿದರೆ ಅಥವಾ ಹಂತಹಂತವಾಗಿ ತಡೆ ಹಿಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಆಗುತ್ತದೆ. ಇವರ ಬೇಡಿಕೆಗಳಿಗಾಗಿ ಮುಗ್ಧ ಹಾಗೂ ಭವ್ಯ ಭವಿಷ್ಯದ ಕಡೆಗೆ ಮುಖ ಮಾಡಿರುವ ವಿದ್ಯಾರ್ಥಿಗಳ ಹಿತ ಬಲಿಕೊಡುವುದು ಎಷ್ಟರ ಮಟ್ಟಿಗೆ ಸರಿ. ಭವಿಷ್ಯದ ಕನಸುಗಳಿಗಾಗಿ ಹಗಲು ರಾತ್ರಿ ಓದಿ ಪರೀಕ್ಷೆ ಬರೆದಿರುವ ಮಕ್ಕಳಿಗೆ ಎಷ್ಟೆಲ್ಲಾ ಕಷ್ಟ ಎದುರಾಗಬಹುದು. ತಮ್ಮ ಮಕ್ಕಳಿಗೆ ಹೀಗಾಗುವುದನ್ನು ಇವರು ಬಯಸುತ್ತಾರಾ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಉಪನ್ಯಾಸಕರ ಸಂಘದ ಬೇಡಿಕೆಗಳ ಕುರಿತಂತೆ ಇಲಾಖೆ ವಹಿಸಿರುವ ಕೆಲ ಕ್ರಮಗಳನ್ನೂ ಸಚಿವರು ಉಲ್ಲೇಖಿಸಿದ್ದಾರೆ. ತಿಮ್ಮಯ್ಯ ಪುರ್ಲೆ ನೇತೃತ್ವದ ನಿಯೋಗದ ಜೊತೆ ನಡೆಸಿದ ಸಭೆಯಲ್ಲಿ ಅವರ ಬೇಡಿಕೆಗಳನ್ನು ಈಡೇರಿಸುವ ಕುರಿತು ಹಲವು ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಮೌಲ್ಯಮಾಪನ ಶುಲ್ಕವನ್ನು ಹೆಚ್ಚಿಸುವ ಭರವಸೆ ನೀಡಿದ್ದೇವೆ. ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಾಂಶುಪಾಲರ ಹುದ್ದೆಗೆ ಪಾರದರ್ಶಕವಾಗಿ ಕೌನ್ಸೆಲಿಂಗ್ ನಡೆಸಿ ಪದೋನ್ನತಿ ನೀಡಲಾಗಿದೆ. ಜೆಓಸಿಯಿಂದ ವಿಲೀನಗೊಂಡ ಉಪನ್ಯಾಸಕರಿಗೆ ಬಿ.ಇಡಿ ವಿನಾಯಿತಿ ನೀಡಲು ಸಚಿವ ಸಂಪುಟದ ಅನುಮೋದನೆಗೆ ಇಡಲಾಗಿದೆ. ವೇತನ ವಿಳಂಬಕ್ಕೆ ಅವಕಾಶ ನೀಡದಂತೆ ಆಡಳಿತ ವಿಭಾಗಕ್ಕೆ ಸೂಚನೆ ನೀಡಿದ್ದೇವೆ. ಕೆಲಸದ ಭಾರ ತಗ್ಗಿಸಲು ಯೋಚಿಸಲಾಗುತ್ತಿದೆ.
ಇನ್ನು ಪದವಿ ಕಾಲೇಜಿಗೆ ಬಡ್ತಿ ನೀಡಬೇಕಾದರೆ ಪದವಿಪೂರ್ವ ಇಲಾಖೆಯ ನಿರ್ಧಾರವೊಂದೇ ಸಾಕಾಗದು ಎನ್ನುವುದು ಉಪನ್ಯಾಸಕ ಸಂಘಟನೆಗೆ ತಿಳಿದಿದೆ. ಅದೇ ರೀತಿ ಎನ್‌ಪಿಎಸ್ ಪಿಂಚಣಿ ವಿಚಾರ ಕೇವಲ ನಮ್ಮ ಇಲಾಖೆ ಮಾತ್ರ ನಿರ್ಧರಿಸುವ ವಿಚಾರವಲ್ಲ. ಹಲವು ಸರ್ಕಾರಗಳ ಕಾಲದಿಂದಲೂ ಚಾಲ್ತಿಯಲ್ಲಿರುವ ಕಾಲ್ಪನಿಕ ಬಡ್ತಿ ಎಂಬ, ಸಂಕೀರ್ಣ ವಿಷಯದ ಕುರಿತು ತಜ್ಞರೊಂದಿಗೆ ಚರ್ಚಿಸುತ್ತಿದ್ದೇನೆ. ನಿಯಮಗಳಲ್ಲಿ ಅಳವಡಿಸಿಕೊಳ್ಳಬಹುದಾದ ಬದಲಾವಣೆಯನ್ನು ತರಲು, ಮತ್ತು ಶಿಕ್ಷಕರ, ಉಪನ್ಯಾಸಕರ ಹಿತ ಕಾಯುವ ಜವಾಬ್ದಾರಿ ನಮಗಿದೆ.
ಈ ನಿಟ್ಟಿನಲ್ಲಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಕುರಿತು ಇಲಾಖೆಯ ಕಾರ್ಯಾಲಯಕ್ಕೆ ಅಥವಾ ನನ್ನ ಗೃಹ ಕಚೇರಿಗೆ ಬಂದು ಚರ್ಚಿಸುವುದಕ್ಕೆ ಅಡ್ಡಿಯಿಲ್ಲ. ಅದು ಬಿಟ್ಟು ದೇಶದ ಭವಿಷ್ಯದ ಆಸ್ತಿಯಾಗಿರುವ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುವುದು ಸರಿಯಲ್ಲ. ನಮ್ಮ ರಾಜಕೀಯ ಹಿತಾಸಕ್ತಿಗೆ ವಿದ್ಯಾರ್ಥಿಗಳ ಹಿತ ಬಲಿಯಾಗಬಾರದು. ಇದು ನಿಮ್ಮೆಲ್ಲರಲ್ಲಿ ನನ್ನ ಆತ್ಮೀಯ, ಆಗ್ರಹಪೂರ್ವಕ ವಿನಂತಿ ಎಂದು ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.