ಬೆಂಗಳೂರು : ಆಗಸ್ಟ್ 30 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ಸಭೆ ನಡೆಯಲಿದೆ. ಅಲ್ಲಿ 1 ರಿಂದ 8 ರವರೆಗೆ ಶಾಲಾ ತರಗತಿಗಳನ್ನು ತೆರೆಯುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಜ್ಞರ ಸಮಿತಿ ಸಭೆ ಬಳಿಕ ಸಿಎಂ 1-8ನೇ ತರಗತಿ ಆರಂಭಿಸುವ ಬಗ್ಗೆ ನಿರ್ಧರಿಸುತ್ತಾರೆ. ಮೂರನೇ ಅಲೆ ಬರುವ ಸಾಧ್ಯತೆ ಇದೆ ಎಂಬ ಮಾತುಗಳಿವೆ. ಹಾಗಾಗಿ, ತಜ್ಞರ ಸಲಹೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಆಗಸ್ಟ್ 23 ರಿಂದ 9- 12ರ ವರೆಗಿನ ತರಗತಿಗಳನ್ನು ಪ್ರಾರಂಭಿಸುತ್ತೇವೆ ಎಂದರು.
ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ : 9 ರಿಂದ 12 ನೇ ತರಗತಿ ಪುನಾರಂಭ ಸಂಬಂಧ ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಶಾಲೆಗಳ ಪುನಾರಂಭಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಎರಡು ಜಿಲ್ಲೆ ಹೊರತುಪಡಿಸಿ ಉಳಿದ ಕಡೆ ಶಾಲೆಗಳು ಪುನಾರಂಭವಾಗಲಿದೆ. ಮಕ್ಕಳಿಗೆ ಪೂರಕವಾದ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ತಿಳಿಸಿದರು.
ಒಂದೇ ಒಂದು ಸೋಂಕು ಕಂಡು ಬಂದರೂ ಶಾಲೆ ಬಂದ್
ತರಗತಿಗಳು ಪುನಾರಂಭವಾದರೆ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಮನೆಯಿಂದ ಬಂದು ಮತ್ತೆ ವಾಪಸಾಗುವವರೆಗೆ ಮಾಸ್ಕ್ ಧರಿಸಿರಬೇಕು. ಇದರ ಉಸ್ತುವಾರಿಯನ್ನು ಶಿಕ್ಷಕರು ನೋಡಿಕೊಳ್ಳುತ್ತಾರೆ. ಶಿಕ್ಷಕರಿಂದಲೂ ಶಾಲೆ ಪುನಾರಂಭಕ್ಕೆ ಬೆಂಬಲವಿದೆ. ಸೋಂಕು ಕಂಡು ಬಂದರೆ ಶಾಲೆ ನಿಲ್ಲಿಸುವ ಶಕ್ತಿ ಸರ್ಕಾರಕ್ಕಿದೆ. ಒಂದೇ ಒಂದು ಸೋಂಕು ಕಂಡು ಬಂದರೂ ತರಗತಿಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಸಚಿವರು ಹೇಳಿದರು.
ಶಾಲೆಗೆ ಬರುವಂತೆ ಬಲವಂತ ಮಾಡುವುದಿಲ್ಲ
ಶಿಕ್ಷಕರ ಜೊತೆ ಕೈಜೋಡಿಸುವಂತೆ ತಹಶೀಲ್ದಾರ್, ಬಿಇಒಗಳಿಗೆ ಸೂಚಿಸಿದ್ದೇವೆ. ಶಾಲೆಗಳ ಕೊಠಡಿ ಸ್ಯಾನಿಟೈಸ್ ಮಾಡುವುದು, ಮಕ್ಕಳಿಗೆ ಮಾಸ್ಕ್ ಒದಗಿಸುವುದನ್ನು ಸ್ಥಳೀಯ ಮಟ್ಟದಲ್ಲಿ ಗ್ರಾ.ಪಂಗಳು ನೋಡಿಕೊಳ್ಳುತ್ತವೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಪೋಷಕರಿಗೆ ಕಡ್ಡಾಯ ಮಾಡಿಲ್ಲ. ಆನ್ಲೈನ್, ಆಫ್ಲೈನ್ ಯಾವುದು ಬೇಕಾದರು ಪಡೆಯಬಹುದು. ಅದನ್ನು ಪೋಷಕರ ಇಚ್ಛೆಗೆ ಬಿಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಶುಲ್ಕ ವಿಚಾರವಾಗಿ ಬಲವಂತ ಬೇಡ : ಖಾಸಗಿ ಶಾಲೆಗಳ ಶುಲ್ಕ ವಸೂಲಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ನಾಗೇಶ್, ನಾವು ಯಾವುದನ್ನೂ ಬಲವಂತವಾಗಿ ಹೇರುವಂತಿಲ್ಲ. ರೂಪ್ಸಾ ಜೊತೆ ನಾನು ಮಾತನಾಡಿದ್ದೇನೆ. ಕೋವಿಡ್ನಿಂದ ಪೋಷಕರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಶುಲ್ಕ ಸಂಬಂಧ ಹೆಚ್ಚು ಬಲವಂತ ಮಾಡಬೇಡಿ ಎಂದಿದ್ದೇವೆ. ಇದಕ್ಕೆ ಖಾಸಗಿ ಶಾಲೆಗಳ ಸಂಘಟನೆ ಒಪ್ಪಿದೆ ಎಂದು ತಿಳಿಸಿದರು.
ಸಂಪೂರ್ಣ ಶುಲ್ಕ ಕಟ್ಟಿ ಅನ್ನುವುದು ಸರಿಯಲ್ಲ, ಪೋಷಕರನ್ನು ಗ್ರಾಹಕರ ರೀತಿ ನೋಡಬೇಡಿ ಎಂದಿದ್ದೇನೆ. ಶಾಲೆಗಳ ಇತಿಮಿತಿಗೆ ತೆಗೆದುಕೊಳ್ಳಬೇಕು, ಪೋಷಕರ ಹಿತವನ್ನೂ ಗಮನಿಸಬೇಕು. ಎಲ್ಲವನ್ನೂ ನೋಡಿಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೆಲವೊಂದು ವಿಚಾರ ನ್ಯಾಯಾಲಯದಲ್ಲಿವೆ. ಹಾಗಾಗಿ ನೇರವಾಗಿ ಹಿಡಿತ ಸಾಧಿಸುವುದು ಕಷ್ಟ ಎಂದು ಶಿಕ್ಷಣ ಸಚಿವರು ವಿವರಿಸಿದರು.
ಓದಿ : ಆನ್ಲೈನ್ ಕಲಿಕೆಗೆ ಸ್ಪೆಷಲ್ ಆ್ಯಪ್ ತಯಾರಿಸಿದ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ