ಬೆಂಗಳೂರು : ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿ) 15,000 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಇಂದು ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಸುತ್ತ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗಕ್ಕೆ 5000 ಹುದ್ದೆಗಳು ಸೇರಿ ಒಟ್ಟು 15,000 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಶಿಕ್ಷಕರ ಕೊರತೆ ನೀಗಿಸಲು ವಿಶೇಷವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ (ಬಿಎಡ್, ಟಿಇಟಿ ಮಾಡಿದ್ದರೆ), ಮಂಗಳಮುಖಿಯರಿಗೂ ಪ್ರತಿ ಪ್ರವರ್ಗದಲ್ಲಿ ಶೇ. 1ರಷ್ಟು ಸಿಇಟಿ ಪರೀಕ್ಷೆಗೆ ಅವಕಾಶ ಇರಲಿದೆ ಎಂದು ಹೇಳಿದ್ದಾರೆ.
ಯಾವಾಗ ಅರ್ಜಿ ಸಲ್ಲಿಸಬೇಕು? : ಮಾರ್ಚ್ 21ರಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಗ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 23ರಿಂದ ಏಪ್ರಿಲ್ 22ಕ್ಕೆ ಕಡೆಯ ದಿನವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೇ 21- 22ರಂದು ನಡೆಯಲಿದೆ ಎಂದರು.
ನೇಮಕಾತಿಯಲ್ಲಿ ನಾಲ್ಕು ವಿಷಯಗಳ ಹುದ್ದೆಗಳಿಗೆ ಅಂದರೆ ಆಂಗ್ಲಭಾಷೆ, ಗಣಿತ ಮತ್ತು ವಿಜ್ಞಾನ- ಜೀವವಿಜ್ಞಾನ (ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಎರಡನೇ ಹುದ್ದೆ) ಮತ್ತು ಸಮಾಜ ಪಾಠಗಳು ಶಿಕ್ಷಕರ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಗಣಿತ ವಿಷಯದಲ್ಲಿ 21,000 ಶಿಕ್ಷಕರ ಹುದ್ದೆ ಖಾಲಿ ಇವೆ. ಎರಡು ಸಲ ಈ ಹುದ್ದೆಗೆ ಕರೆದಾಗಲೂ 600 ಹುದ್ದೆ ಮಾತ್ರ ಭರ್ತಿಯಾಗಿವೆ ಎಂದು ತಿಳಿಸಿದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾಗಿದೆ. ಶಿಕ್ಷಣದ ಬುನಾದಿ ಆಗಿರುವ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ರೂವಾರಿಗಳಾಗಿ ಕಾರ್ಯನಿರ್ವಹಿಸುವ ಶಿಕ್ಷಕರ ಗುಣಮಟ್ಟ ಅತ್ಯಂತ ನಿರ್ಣಾಯಕ ಪಾತ್ರವಹಿಸಲಿದೆ.
2017ರಲ್ಲಿ 10,000 ಅಧಿಸೂಚಿತ ಹುದ್ದೆಗಳಿಗೆ 3,389 ಹುದ್ದೆಗಳು ಮತ್ತು 2019ರ ನೇಮಕಾತಿಯಲ್ಲಿ 10,565 ಅಧಿಸೂಚಿತ ಹುದ್ದೆಗಳಿಗೆ 1,994 ಹುದ್ದೆಗಳು ಒಟ್ಟಾರೆ 5,383 ಹುದ್ದೆಗಳು ಮಾತ್ರ ಭರ್ತಿಯಾಗಿವೆ ಎಂದು ಮಾಹಿತಿ ನೀಡಿದರು.
ಈ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಸ್ತುತ ಖಾಲಿಯಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (6 ರಿಂದ 8ನೇ ತರಗತಿ) ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ರಾಜ್ಯ ಸರ್ಕಾರವು ನೇರ ನೇಮಕಾತಿಯಿಂದ ಭರ್ತಿ ಮಾಡಲು ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ 5000 ಹುದ್ದೆಗಳು ಉಳಿದ ಜಿಲ್ಲೆಗಳಿಗೆ 10,000 ಹುದ್ದೆಗಳು ಸೇರಿದಂತೆ ಒಟ್ಟು 15,000 ಹುದ್ದೆಗಳನ್ನು ನೇಮಕಾತಿಗೆ ಅನುಮೋದನೆ ನೀಡಿರುವುದಾಗಿ ತಿಳಿಸಿದರು.
ವಯೋಮಿತಿ ಸಡಿಲಿಕೆ : ಸಾಂಕ್ರಾಮಿಕ ಕೋವಿಡ್ ಕಾರಣಕ್ಕೆ ಈ ಸಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ, ವರ್ಗ, ಪ್ರವರ್ಗ-1, ವಿಕಲಚೇತನರಿಗೆ ಈ ಹಿಂದೆ 45 ವರ್ಷ ಇದ್ದ ವಯೋಮಿತಿಯನ್ನ 47ಕ್ಕೆ ಏರಿಸಲಾಗಿದೆ. ಇನ್ನು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ 43 ವರ್ಷ ಇದ್ದಿದ್ದು, 45ಕ್ಕೆ ಹಾಗೂ ಸಾಮಾನ್ಯ ವರ್ಗದವರು 40 ವರ್ಷದಿಂದ 42 ವರ್ಷಕ್ಕೆ ಏರಿಕೆ ಮಾಡಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ : ರಾಜ್ಯದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವುಗಳನ್ನು ತುರ್ತಾಗಿ ಭರ್ತಿ ಮಾಡಿಕೊಳ್ಳಬೇಕಿದೆ. ಈ ಹಿಂದಿನ ನೇಮಕಾತಿಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಹುದ್ದೆಗಳು ಭರ್ತಿಯಾದ ಕಾರಣ ಶಿಕ್ಷಕರ ನೇಮಕಾತಿ ಅರ್ಹತೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-2 ಮತ್ತು ಪತ್ರಿಕೆ-3ರಲ್ಲಿ ಪಡೆಯಬೇಕಾದ ಅಂಕಗಳ ಮಿತಿಯನ್ನು ಸಡಿಲಗೊಳಿಸುವುದು ಸೂಕ್ತವೆಂದು ಅಭಿಪ್ರಾಯ ಬಂದಿದೆ.
ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಪತ್ರಿಕೆ-2ಕ್ಕೆ (ವಿಷಯ ಜ್ಞಾನ) ಕನಿಷ್ಠ ಅರ್ಹತಾ ಅಂಕಗಳ ಮಿತಿಯನ್ನು ಶೇ.50ರ ರಿಂದ ಶೇ.45ಕ್ಕೆ ಹಾಗೂ ಪತ್ರಿಕೆ-3ರಲ್ಲಿ (ಭಾಷಾ ಸಾಮರ್ಥ್ಯ) ಮಿತಿಯನ್ನು ಕನಿಷ್ಠ ಶೇ.60 ರಿಂದ ಶೇ.50ಕ್ಕೆ ಇಳಿಸಲಾಗಿದೆ ಎಂದರು. ಇನ್ನು ಜೀವವಿಜ್ಞಾನ ಶಿಕ್ಷಕ (Biological Science) ಹುದ್ದೆಗೆ ಅವಕಾಶ ಇದ್ದು, ಬಿಎಸ್‌ಸಿ ಪದವಿಯಲ್ಲಿ ರಸಾಯನಶಾಸ್ತ್ರ ಕಡ್ಡಾಯವಾಗಿದೆ.
ಆದರೀಗ ಈ ವಿಷಯದೊಂದಿಗೆ ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ತಳಿಶಾಸ್ತ್ರ, ಸೂಕ್ಷ್ಮಜೀವಿಶಾಸ್ತ್ರ ಜೈವಿಕ ತಂತ್ರಜ್ಞಾನ/ಪರಿಸರ ವಿಜ್ಞಾನ/ ರೇಷ್ಮೆ ಕೃಷಿ ವಿಷಯಗಳನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಹೊಸದಾಗಿ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಆರ್ ಧ್ರುವನಾರಾಯಣ್ ಮೇಕೆ ಮೇಯಿಸಲು ಲಾಯಕ್ಕು.. ಸಂಸದ ಶ್ರೀನಿವಾಸ ಪ್ರಸಾದ್ ಲೇವಡಿ
ಗಣಿತ ಮತ್ತು ವಿಜ್ಞಾನ ಶಿಕ್ಷಕ ಹುದ್ದೆಗೆ ನಿಗದಿಪಡಿಸಲಾಗಿದ್ದ ವಿಷಯ ಸಮೂಹಕ್ಕೆ ಹೆಚ್ಚುವರಿ ವಿಷಯಗಳ ಸೇರ್ಪಡೆ ಮಾಡಲಾಗಿದೆ. ಈ ಹಿಂದಿನ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕ ಹುದ್ದೆಗೆ ಪದವಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯಶಾಸ್ತ್ರ ವಿಷಯಗಳನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದ ಪದವೀಧರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಆದರೆ, ಪ್ರಸ್ತುತ ರೂಪಿಸಲಾದ ನಿಯಮಗಳಲ್ಲಿ ಬಿಎಸ್‌ಸಿ ಪದವಿಯಲ್ಲಿ ಗಣಿತ, ಭೌತಶಾಸ್ತ್ರ ಕಡ್ಡಾಯವಾಗಿ ಅಧ್ಯಯನ ಮಾಡಿದ ಪದವೀಧರರು ಈ ವಿಷಯಗಳೊಂದಿಗೆ ಮೂರನೇ ವಿಷಯವಾಗಿ ರಸಾಯಶಾಸ್ತ್ರ/ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್/ಸಂಖ್ಯಾಶಾಸ್ತ್ರ ಭೂವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡಿದವರಿಗೂ ಅವಕಾಶ ಕಲ್ಪಿಸಲಾಗಿದೆ.
ಅಂಕ ಸಡಿಲಿಕೆ : ಹುದ್ದೆಗೆ ನಿಗದಿಪಡಿಸಿದ ಐಚ್ಛಿಕ ವಿಷಯಗಳಲ್ಲಿ ಶೇ.50ರಷ್ಟು ಅಂಕ ಗಳಿಸಿರಬೇಕೆಂಬ ನಿಯಮ ಸಡಲೀಕರಿಸಿ, ಪದವೀಧರರು ಪದವಿಯಲ್ಲಿ ಒಟ್ಟಾರೆಯಾಗಿ ಕನಿಷ್ಟ (ಸರಾಸರಿ) ಶೇ.50ರಷ್ಟು ಅಂಕಗಳನ್ನು ಗಳಿಸಿರಬೇಕು ಎಂದು ತಿಳಿಸಿದ್ದಾರೆ. ಹಾಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಪ್ರವರ್ಗ-1 ಮತ್ತು ವಿಕಲಚೇತನರಿಗೆ ಶೇ.45ರಷ್ಟು ಅಂಕ ಗಳಿಸಿರಬೇಕು ಎಂಬುದಾಗಿ ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.