ಬೆಂಗಳೂರು : ರಾಜ್ಯ ಸರ್ಕಾರವು ಲಾಕ್ಡೌನ್ ನಿಯಮಗಳನ್ನ ಸಡಿಲ ಮಾಡಿದ್ದು, ಬಾರ್ ಅಂಡ್ ರೆಸ್ಟೋರೆಂಟ್, ಮದುವೆ ಕಾರ್ಯಕ್ರಮ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅನುಮತಿ ನೀಡಿದೆ. ಆದರೆ, ಶಾಲೆಗಳಲ್ಲಿ ಭೌತಿಕ ತರಗತಿಗಳನ್ನ ಆರಂಭಿಸಲು ಸರ್ಕಾರ ಯಾಕೆ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ ಅಂತ ಶಿಕ್ಷಣ ತಜ್ಞ ನಿರಂಜನಾರಾಧ್ಯ ಪ್ರಶ್ನಿಸಿದ್ದಾರೆ.
ತಾಂತ್ರಿಕ ಸಲಹಾ ಸಮಿತಿಯು ಶಾಲೆಗಳನ್ನ ಭೌತಿಕವಾಗಿ ಆರಂಭಿಸಲು ಸೂಚಿಸಿದರೂ ಸಹ ಶಿಕ್ಷಣ ಸಚಿವರು ಮಾತ್ರ ಮೌನವಾಗಿದ್ದಾರೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.
ಮಕ್ಕಳಿಗೆ ಶಾಲೆಯು 2ನೇ ಮನೆಯಾಗಿದ್ದು, ಬಿಸಿ ಹಾಲು, ಬಿಸಿಯೂಟ, ರೋಗನಿರೋಧಕ ಮಾತ್ರೆಗಳು ಸಿಗುತ್ತವೆ. ಇವೆಲ್ಲವೂ ಸಿಗದೇ ಇದ್ದರೆ, ಮಕ್ಕಳು ಕೋವಿಡ್ಗಿಂತ ಹೆಚ್ಚಾಗಿ ಅಪೌಷ್ಟಿಕತೆಯಿಂದ ಸಾಯುವ ಅಪಾಯ ಹೆಚ್ಚಿದೆ ಎಂದರು. ರಾಜ್ಯದಲ್ಲಿ ಶಾಲೆ ಆರಂಭ ವಿಳಂಬವಾದರೆ, ಅಪೌಷ್ಟಿಕತೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಕಳ್ಳಸಾಗಣೆ, ಭಿಕ್ಷುಕರು ಹೆಚ್ಚಾಗಬಹುದು. ಮಕ್ಕಳ ಪರಿಸ್ಥಿತಿ ಮತ್ತಷ್ಟು ಹದಗೆಡಿಸುತ್ತೆ ಅಂತಾ ವರದಿ ನೀಡಿದೆ. ಹೀಗಿದ್ದ ಮೇಲೂ ಶಾಲೆಯಲ್ಲಿ ಭೌತಿಕ ತರಗತಿ ಆರಂಭಕ್ಕೆ ಮೀನಾ ಮೇಷ ಯಾಕೆ ಅಂತಾ ಪ್ರಶ್ನಿಸಿದ್ದಾರೆ.
ಸರ್ಕಾರಿ, ಅನುದಾನಿತ ಶಾಲೆಗಳನ್ನ ಮುಖ್ಯವಾಗಿ ಗ್ರಾಮೀಣ ಭಾಗದ ಶಾಲೆಗಳನ್ನ ಆರಂಭಿಸುವ ಅಗತ್ಯವಿದೆ. ಮಕ್ಕಳು ಭಾಷಾ ವಿಷ್ಯ ಹಾಗೂ ಗಣಿತ ವಿಷ್ಯಗಳನ್ನ ಮರೆಯುತ್ತಿದ್ದಾರೆ. ಇದು ಮತ್ತೊಂದು ಹಂತದ ದುರಂತಕ್ಕೆ ಸಾಕ್ಷಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಸಮಿತಿ ವರದಿ ಕೊಟ್ಟ ಮೇಲೂ ಮತ್ತೊಂದು ಸಮಿತಿ ರಚನೆ ಯಾಕೆ?
ಈಗಾಗಲೇ ಶಾಲಾರಂಭದ ಕುರಿತು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ವರದಿಯನ್ನು ನೀಡಿದ್ದಾರೆ. ಹೀಗಿರುವಾಗ ಆ ವರದಿಯನ್ನ ಪರಿಶೀಲಿಸಲು ಮತ್ತೊಂದು ತಜ್ಞರ ಸಮಿತಿ ರಚನೆ ಅಗತ್ಯ ಇರಲಿಲ್ಲ. ಈಗಾಗಲೇ ಸಮಿತಿ ರಚನೆ ಬಗ್ಗೆ ಮಾತಾನಾಡಿ 10 ದಿನಗಳು ಕಳೆದಿದ್ದು, ಈ ತನಕ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ರೂಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳೀಕಟ್ಟೆ ಮಾತನಾಡಿ, ಶಾಲೆಯಲ್ಲಿ ಭೌತಿಕ ತರಗತಿ ಆರಂಭಿಸುವಂತೆ ಒತ್ತಾಯ ಮಾಡಿದ್ದು, ಮಕ್ಕಳ ಹಿತದೃಷ್ಟಿಯಿಂದಲೇ ಹೊರತು ಯಾವುದೇ ಶುಲ್ಕ ವಸೂಲಿ ಕಾರಣಕ್ಕಲ್ಲ ಎಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಕ್ಕಳು ಒಂದೂವರೆ ವರ್ಷದಿಂದ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ.
ಶುಲ್ಕಕ್ಕಿಂತ ಹೆಚ್ಚಾಗಿ, ಮಕ್ಕಳಿಗೆ ಗುಣಮಟ್ಟದ ಕಲಿಕೆಯನ್ನ ನೀಡಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಪಾಳಿ ವ್ಯವಸ್ಥೆಯೋ, ವಿದ್ಯಾಗಮವೋ, ಯಾವ ರೀತಿಯಲ್ಲಿಯಾದರೂ ಮಕ್ಕಳ ಕಲಿಕೆಗೆ ಅವಕಾಶ ಕೊಡಿ ಎಂದಿದ್ದಾರೆ.