ಬೆಂಗಳೂರು : ನವೆಂಬರ್ 17ರಿಂದ ಸ್ನಾತಕೋತ್ತರ ಪದವಿ ಕಾಲೇಜುಗಳು ಶುರುವಾಗಲಿರುವ ಹಿನ್ನೆಲೆ, ಶಾಲೆ ಆರಂಭದ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಎರಡು ದಿನಗಳ ಕಾಲ ಸಮಾಜ ಕಲ್ಯಾಣ ಇಲಾಖೆ, ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ರಾಜ್ಯದ ಎಲ್ಲ ತಾಲೂಕಿನ ಎಸ್ಡಿಎಂಸಿ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದೆ.
ಎರಡು ದಿನಗಳ ಗ್ರೌಂಡ್ ರಿಪೋರ್ಟ್ ಮುಗಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಂದೇನು ಮಾಡಲಿದೆ ಅನ್ನೋ ಪ್ರಶ್ನೆ ಕಾಡುವುದು ಸಹಜ. ಸದ್ಯ ಎಲ್ಲರ ಸಲಹೆ, ಸಾಧಕ-ಬಾಧಕಗಳ ಮಾಹಿತಿ ಪಡೆದಿರುವ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ಇದರ ಆಧಾರದ ಮೇಲೆ ವರದಿ ತಯಾರು ಮಾಡಲಿದ್ದಾರೆ.
ಎರಡು ದಿನ ಸಲಹೆಗಳನ್ನ ಪಡೆಯುವುದು ಮುಗಿದಿದ್ದು, ಇನ್ನೂ ಎರಡು ದಿನಗಳ ಕಾಲ ವರದಿ ತಯಾರಿ ಆಗಲಿದೆ. ಬಳಿಕ ಶಿಕ್ಷಣ ಸಚಿವರು ಆ ವರದಿಯನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಿಸಲಿದ್ದು, ಮುಂದಿನ ಹೆಜ್ಜೆ ಹಾಗೂ ಕ್ರಮಗಳ ಬಗ್ಗೆ ಘೋಷಣೆ ಮಾಡಲಾಗುತ್ತೆ.
ಆಯುಕ್ತರು ವರದಿ ಸಿದ್ದಪಡಿಸಿ ಸಚಿವ ಸುರೇಶ್ ಕುಮಾರ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಸೋಮವಾರ ಇಲ್ಲ ಮಂಗಳವಾರದೊಳಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ತಯಾರಿಸುವ ವರದಿಯು, ಸಿಎಂ ಯಡಿಯೂರಪ್ಪ ಅವರ ಕೈಸೇರಲಿದೆ. ಬುಧವಾರದೊಳಗೆ ರಾಜ್ಯದಲ್ಲಿ ಶಾಲೆ ಆರಂಭ ಯಾವಾಗ ಎಂಬುದರ ಕುರಿತು ಸ್ಪಷ್ಟತೆ ಸಿಗಲಿದೆ.