ಬೆಂಗಳೂರು: ಟಿಇಟಿ 2022ರ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್ ಅವರ ಚಿತ್ರ ಪ್ರಕಟ ಎಂಬ ಸುದ್ದಿಯು ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿದ್ದು ಇದು ಇಲಾಖೆ ಅಥವಾ ಸರ್ಕಾರದಿಂದ ಉಂಟಾಗಿರುವ ಲೋಪವಲ್ಲ ಎಂದು ಶಿಕ್ಷಣ ಇಲಾಖೆ ಸೃಷ್ಟೀಕರಣ ನೀಡಿದೆ.
ನ.6 ರಂದು ಪರೀಕ್ಷೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ 781 ಕೇಂದ್ರಗಳಲ್ಲಿ ನಡೆಸಲಾಗಿದ್ದು, 3,32,913 ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷಾ ಹಾಜರಾತಿ ಶೇಕಡಾ 92 ರಷ್ಟಿತ್ತು. ಪರೀಕ್ಷೆ ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಲೋಪದೋಷಗಳಿಲ್ಲದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದಿದೆ ಎಂದು ಇಲಾಖೆ ತಿಳಿಸಿದೆ.
ಪ್ರತಿ ಅಭ್ಯರ್ಥಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಮುನ್ನ ತಾನೇ ತನ್ನ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಸೃಷ್ಟಿಸಿಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ. ಈ ರೀತಿಯಾಗಿ ಸೃಷ್ಟಿಸಿಕೊಂಡ ಯೂಸರ್ ಐಡಿ ಮತ್ತು ಪಾಸ್ವರ್ಡ್ ಮಾಹಿತಿಯು ಸಂಪೂರ್ಣ ಗೌಪ್ಯ ಹಾಗೂ ಅಭ್ಯರ್ಥಿಯ ಖಾಸಗಿ ಮಾಹಿತಿಯಾಗಿರುತ್ತದೆ. ಇದನ್ನು ಬಳಸಿಯೇ ಲಾಗಿನ್ ಆಗುವ ಮೂಲಕ ಅಭ್ಯರ್ಥಿ ತನ್ನ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ನಿಗದಿತ ಅಂಕಣದಲ್ಲಿ ಅಪ್‌ಲೋಡ್ ಮಾಡಿದ ನಂತರ, ತಾನು ನೀಡಿರುವ ಮಾಹಿತಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಅರ್ಜಿ ಸಬ್ಮಿಟ್ ಮಾಡಿದ ನಂತರವೇ ನಿಗದಿತ ಅರ್ಜಿ ಶುಲ್ಕ ಪಾವತಿಸಿ, ತನ್ನ ಆನ್‌ಲೈನ್ ಅರ್ಜಿಯ ಪ್ರಿಂಟ್ ಅನ್ನು ಪಡೆಯುತ್ತಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಟಿಇಟಿ ಹಾಲ್ ಟಿಕೆಟ್ನಲ್ಲಿ ಸನ್ನಿ ಲಿಯೋನ್ ಪೋಟೋ.. ಪೊಲೀಸರಿಗೆ ದೂರು
ಅಭ್ಯರ್ಥಿ ತನ್ನ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ ತನ್ನ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಈ ತಂತ್ರಾಂಶವು KSWAN ಅಂತರ್ಜಾಲ ಸೌಲಭ್ಯವನ್ನು ಹೊಂದಿದ್ದು, ಸಂಪೂರ್ಣ ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆಯ ಸ್ಟೇಟ್ ಡೇಟಾ ಸೆಂಟರ್ (SDC) ನಿಯಂತ್ರಣದ ಸರ್ವರ್ನಲ್ಲಿ ಅಳವಡಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಕಚೇರಿಯ ತಂತ್ರಾಂಶವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಅಭ್ಯರ್ಥಿಯನ್ನು ಹೊರತುಪಡಿಸಿ ಇತರರು ಆನ್‌ಲೈನ್ ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಶಿಕ್ಷಣ ಇಲಾಖೆ ಎಡವಟ್ಟು: ಪರೀಕ್ಷಾ ಕೇಂದ್ರ ಸಿಗದೆ ಟಿಇಟಿ ಪರೀಕ್ಷಾರ್ಥಿಗಳ ಪರದಾಟ
ಆದ್ದರಿಂದ ಮಾಧ್ಯಮದಲ್ಲಿ ಬಿತ್ತರವಾಗಿರುವ ಸುದ್ದಿಯಲ್ಲಿ ಇಲಾಖೆಯ ಪಾತ್ರವಿಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮಾಡಿ, ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಕೋರಲಾಗಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.