ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ ಐವರ ವಿರುದ್ಧ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಘಟಕದ ಜಾರಿ ನಿರ್ದೇಶಾನಾಲಯ (ಇ.ಡಿ) ಅಧಿಕಾರಿಗಳು ಐವರು ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಪಿಎಸ್ಐ ನೇಮಕಾತಿ ಜಾಲದಲ್ಲಿ ಪ್ರತ್ಯೇಕವಾಗಿ 8 ಎಫ್ಐಆರ್ ದಾಖಲಿಸಿ ಇದುವರೆಗೂ 80 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಮೂರು ಪ್ರತ್ಯೇಕವಾಗಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಅಕ್ರಮವಾಗಿ ಪಿಎಸ್ಐ ಹುದ್ದೆ ಪಡೆಯಲು ಆಭ್ಯರ್ಥಿಗಳು ಮಧ್ಯವರ್ತಿಗಳ ಮುಖಾಂತರ ನೇಮಕಾತಿ ವಿಭಾಗದ ಸಿಬ್ಬಂದಿ ಲಕ್ಷಾಂತರ ರೂಪಾಯಿ ಹಣ ಪಡೆದಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಈ ಸಂಬಂಧ ಪಿಎಂಎಲ್‌ಎ ಕಾಯ್ದೆ ಉಲ್ಲಂಘನೆ ಕಂಡುಬಂದಿದ್ದರಿಂದ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಇ.ಡಿ ಅಧಿಕಾರಿಗಳು ಡಿವೈಎಸ್ಪಿ ಶಾಂತಕುಮಾರ್, ಎಫ್ ಡಿಎ ಹರ್ಷ, ಆಭ್ಯರ್ಥಿಗಳಾದ ಜಾಗೃತ್, ಮಂಜುನಾಥ್ ಹಾಗೂ ಶರತ್ ಕುಮಾರ್ ಅವರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಅಕ್ರಮವಾಗಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ. 30 ರಿಂದ 50 ಲಕ್ಷವರೆಗೂ ಆಭ್ಯರ್ಥಿಗಳು ಎಫ್ ಡಿಎ ಶ್ರೀಹರ್ಷನಿಗೆ ಕೊಟ್ಟಿರುವುದನ್ನು ಸಿಐಡಿ ತನಿಖೆ ವೇಳೆ ಒಪ್ಪಿಕೊಂಡಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಪಿಎಸ್ಐ ಹಗರಣದ ಸದ್ದು : ಉಭಯ ಸದಸ್ಯರ ನಡುವೆ ಮಾತಿನ ಚಕಮಕಿ