ಬೆಂಗಳೂರು: ಅಕ್ರಮವಾಗಿ ವಿದೇಶಿ ಫಂಡ್ ಸ್ವೀಕಾರ ಹಾಗೂ ಹಣ ವರ್ಗಾವಣೆ ಆರೋಪದ ಮೇಲೆ ಬೈಜುಸ್ ಕಂಪನಿಗೆ ಸೇರಿದ ಮೂರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.
ಬೈಜುಸ್ ಕಂಪನಿಯ ಎರಡು ವ್ಯವಹಾರಿಕ ಸ್ಥಳ ಮತ್ತು ಸಂಸ್ಥಾಪಕ ರವೀಂದ್ರನ್ ಬೈಜು ನಿವಾಸದಲ್ಲಿ ಇಡಿ ಪರಿಶೀಲನೆ ನಡೆಸುತ್ತಿದೆ. ಥಿಂಕ್ ಆ್ಯಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನಡೆಸಲಾಗುತ್ತಿರುವ ಬೈಜುಸ್, ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆ್ಯಕ್ಟ್ ಉಲ್ಲಂಘನೆ ಮಾಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿದೆ.
ಪರಿಶೀಲನೆ ಸಂದರ್ಭದಲ್ಲಿ ಕೆಲ ದಾಖಲೆಗಳು, ಡಿಜಿಟಲ್ ಡಾಟಾವನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 2011-23ರವರೆಗೂ 28 ಸಾವಿರ ಕೋಟಿ ರೂ. ಹಣವನ್ನು ವಿದೇಶದಿಂದ ನೇರ ಹೂಡಿಕೆ ರೂಪದಲ್ಲಿ ಸ್ವೀಕರಿಸಿರುವುದು ಪತ್ತೆ ಆಗಿದೆ. ಇದೇ ಅವಧಿಯಲ್ಲಿ 9,754 ಕೋಟಿ ರೂ. ವಿದೇಶಿ ನೇರ ಹೂಡಿಕೆ ಹೆಸರಿನಲ್ಲಿ ವರ್ಗಾವಣೆ ಮಾಡಿರುವುದು, 944 ಕೋಟಿ ರೂ. ಜಾಹಿರಾತು, ಮಾರ್ಕೆಟಿಂಗ್ಗೆ ಖರ್ಚು ಮಾಡಲಾಗಿದೆ ಎಂದು ಕಂಪನಿ ದಾಖಲೆಗಳಲ್ಲಿ ತೋರಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಹಲವೆಡೆ ರಸ್ತೆ ನಿರ್ಬಂಧ.. ಇಲ್ಲಿದೆ ಪರ್ಯಾಯ ಮಾರ್ಗಗಳ ವಿವರ
ಬೈಜುಸ್ 2020-21ರ ಆರ್ಥಿಕ ವರ್ಷದಿಂದ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸದಿರುವುದು ಪತ್ತೆ ಆಗಿದೆ. ಅನೇಕ ಖಾಸಗಿ ಕಂಪನಿ ಹಾಗೂ ವ್ಯಕ್ತಿಗಳ ದೂರು ಆಧರಿಸಿ ತನಿಖೆ ಆರಂಭಿಸಿದ್ದ ಇಡಿ ಸಮನ್ಸ್ ನೀಡಿದ್ದರೂ ಸಹ ವಿಚಾರಣೆಗೆ ಬೈಜುಸ್ ಸಂಸ್ಥಾಪಕ ರವೀಂದ್ರನ್ ಅವರು ಹಾಜರಾಗಿರಲಿಲ್ಲ. ಈ ಹಿನ್ನೆಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ: 32 ಕೋಟಿ ರೂ. ಬಾಚಿಕೊಂಡ ಐಶ್ವರ್ಯಾ ರೈ ಸಿನಿಮಾ: 'ಪೊನ್ನಿಯಿನ್ ಸೆಲ್ವನ್ 2'ಕ್ಕೆ ಭಾರಿ ಮೆಚ್ಚುಗೆ