ಬೆಂಗಳೂರು: ಅಮ್ನೆಸ್ಟಿ ಇಂಟರ್ನ್ಯಾಷನಲ್ ಟ್ರಸ್ಟ್ ನ ಭಾರತೀಯ ಬ್ಯಾಂಕ್ ಖಾತೆಗಳನ್ನು ಯಾವ ಕಾನೂನಿನ ಅಡಿ ಸ್ಥಗಿತಗೊಳಿಸಲು ನಿರ್ದೇಶನ ನೀಡಿದ್ದೀರಿ ಎಂದು ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ಈ ಕುರಿತು ವಿವರಣೆ ನೀಡುವಂತೆ ಸೂಚಿಸಿದೆ.
ತಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಕ್ರಮ ಪ್ರಶ್ನಿಸಿ ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್ನ್ಯಾಷನಲ್ ಟ್ರಸ್ಚ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ಯಾವ ಕಾನೂನು ಆಧಾರದಲ್ಲಿ ಇಡಿ ಈ ಕ್ರಮ ಜರುಗಿಸಿದೆ ಎಂಬುದನ್ನು ತಿಳಿಸುವಂತೆ ಸೂಚನೆ ನೀಡಿದೆ.
ಅರ್ಜಿದಾರರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಟ್ರಸ್ಟ್ನ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್ಗಳಿಗೆ ನಿರ್ದೇಶನ ನೀಡುವಾಗಲೂ ಕಾನೂನಿನ ನಿಬಂಧನೆಗಳನ್ನು ಪಾಲಿಸಿಲ್ಲ. ಗ್ರಾಹಕರ ವಹಿವಾಟಿಗೆ ಸಂಬಂಧಿಸಿದ ಮಾಹಿತಿಗಳನ್ನು ಬ್ಯಾಂಕ್ ರಹಸ್ಯವಾಗಿ ಇರಿಸಬೇಕು ಮತ್ತು ಬೇರೆ ಯಾರಿಗೂ ಮಾಹಿತಿ ನೀಡಬಾರದು. ಹೀಗಿದ್ದರೂ ಕೂಡ ಬ್ಯಾಂಕ್ ಖಾತೆದಾರರ ವ್ಯವಹಾರಗಳನ್ನು ಇಡಿ ಜೊತೆ ಹಂಚಿಕೊಂಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಂಪನಿ ಮೇಲೆ ಸಿಬಿಐ ದಾಳಿ
ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಉಲ್ಲಂಘಿಸಿ ಭಾರೀ ಮೊತ್ತದ ದೇಣಿಗೆ ಸಂಗ್ರಹಿಸಿದೆ ಎಂಬ ಆರೋಪದಡಿ 2019ರ ಅಕ್ಟೋಬರ್ 25 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಮ್ನೆಸ್ಟಿ ಕಚೇರಿ ಮೇಲೆ ದಾಳಿ ನಡೆಸಿದ್ದರು. ಅಮ್ನೆಸ್ಟಿ ಸಂಸ್ಥೆಗೆ ಅಕ್ರಮವಾಗಿ ವಿದೇಶದಿಂದ 36 ಕೋಟಿ ಹಣ ವರ್ಗಾವಣೆಯಾಗಿದೆ. ಇದರಲ್ಲಿ 10 ಕೋಟಿ ರೂ. ಅನ್ನು ದೀರ್ಘಾವಧಿ ಸಾಲವಾಗಿ ಪಡೆಯಲಾಗಿದೆ. ಸಂಸ್ಥೆ ಪಿಎಂಎಲ್ಎ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಇಡಿ ಆರೋಪಿಸಿತ್ತು.