ಬೆಂಗಳೂರು: ರಾಜ್ಯ ಸರ್ಕಾರ ಗ್ರೀನ್ ಪಟಾಕಿ ಬಿಟ್ರೆ ಬೇರೆ ವಿಷಕಾರಿ ಹೊಗೆ ಬರುವ ಪಟಾಕಿಗಳನ್ನ ನಿಷೇಧಿಸಿದೆ. ಇವೆಲ್ಲದರ ನಡುವೆ ಈ ಬಾರಿ ದೀಪಾವಳಿಯನ್ನ ವಿಭಿನ್ನವಾಗಿ ಆಚರಿಸಬೇಕು ಅಂತ ಅಂದುಕೊಂಡವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ.
ನಗರದ ಮಾರುಕಟ್ಟೆಗಳಲ್ಲಿ ಈಗಾಗಲೇ ಇಕೋ ಫ್ರೆಂಡ್ಲಿ ಪಟಾಕಿಗಳು ಲಗ್ಗೆ ಇಟ್ಟಿವೆ. ಪ್ರತಿಯೊಂದು ಪಟಾಕಿಯಲ್ಲೂ ಒಂದೊಂದು ತರಕಾರಿ - ಹಣ್ಣು ಹಾಗೂ ಬೇರೆ ಬೇರೆ ಗಿಡದ ಬೀಜಗಳನ್ನು ಪೇಪರ್ ಅಥವ ಕಾಟನ್ ಬಟ್ಟೆಯಲ್ಲಿ ಸಂರಕ್ಷಿಸಿ ಇಡಲಾಗಿದೆ.
ದೀಪಾವಳಿ ಹಬ್ಬ ಬಂತು ಅಂದ್ರೆ ಸಾಕು ಹೆಂಗಸರು ಮನೆ ತುಂಬ ದೀಪಗಳನ್ನು ಹಚ್ಚಿ ಬೆಳಗುತ್ತಾರೆ. ಇತ್ತ ಕಡೆ ಸಣ್ಣ ಮಕ್ಕಳಿಂದ ಹಿಡಿದು ಎಲ್ಲ ಯುವಕರು ಅತಿ ಹೆಚ್ಚು ಶಬ್ಧ ಬರುವ ಪಟಾಕಿ ಸಿಡಿಸಿ ಆನಂದಿಸುತ್ತಾರೆ. ಇದರಿಂದ ಪ್ರತಿ ವರ್ಷ ಶಬ್ದ ಮಾಲಿನ್ಯದ ಜೊತೆಗೆ ವಾಯು ಮಾಲಿನ್ಯ ಕೂಡ ಹೆಚ್ಚಾಗ್ತಿದೆ. ಹೀಗಾಗಿ, ಮಾರುಕಟ್ಟೆಗೆ ಈ ಇಕೋ ಫ್ರೆಂಡ್ಲಿ ಪಟಾಕಿಗಳು ಲಗ್ಗೆ ಇಟ್ಟಿವೆ. ಇವುಗಳಿಗೆ ಬೆಂಕಿ ಹಚ್ಚುವ ಅಗತ್ಯವಿಲ್ಲ. ಮಣ್ಣಿನಲ್ಲಿ ಹೂತಾಕಿದ್ರೆ ಸಾಕು 6 - 7 ವಾರಗಳಲ್ಲಿ ಗಿಡ ಹುಟ್ಟಿಕೊಳ್ಳುತ್ತದೆ.
ದೀಪಾವಳಿ ಹಬ್ಬಕ್ಕೆ ಧೂಮ್ - ಧಾಮ್ ಅಂತ ಪಟಾಕಿಗಳನ್ನು ಹೊಡೆದು ಪ್ರಕೃತಿಗೆ ಹಾನಿಯಾಗುವುದರ ಜೊತೆಗೆ ಮೂಕ ಪ್ರಾಣಿಗಳು ಕೂಡ ಹೇಳಿಕೊಳ್ಳಲಾಗದ ಹಿಂಸೆಯನ್ನು ಅನುಭವಿಸುತ್ತವೆ. ಹೀಗಾಗಿ, ಈ ವರ್ಷದ ದೀಪಾವಳಿ ಹಬ್ಬದಂದು ಸಾರ್ವಜನಿಕರು ಕೂಡ ಪಟಾಕಿ ಮಾದರಿಯ ಪೇಪರ್ ಸೀಡ್‌ಗಳನ್ನು ಖರೀದಿಸಿ ಉಪಯೋಗಿಸಿದರೆ ಉತ್ತಮವಾಗಲಿದೆ.