ಬೆಂಗಳೂರು: ನಾಟಿ ಕೋಳಿ ಸಾಂಬಾರ್, ಬಿಸಿ ಬಿಸಿ ಮುದ್ದೆ ಮುಂದಿದ್ರೆ ಯಾರ್ ತಾನೇ ಸುಮ್ನೆ ಇರ್ತಾರೆ ಹೇಳಿ. ಅದರಲ್ಲೂ ಕಾಂಪಿಟೇಷನ್ ಅಂತ ಕೂರಿದ್ರೆ ಕೇಳ್ಬೇಕಾ, ಅಯ್ಯೋ ನಾನು ಗೆಲ್ಲಬೇಕು ಇಲ್ಲ ಹೊಟ್ಟೆ ತುಂಬಿಸ್ಕೊಬೇಕು ಅಂತ ಜಿದ್ದಿಗೆ ಬೀಳ್ತಾರೆ. ಇಂತಹದ್ದೇ ವಿಶಿಷ್ಟ ಸ್ಪರ್ಧೆ ನಗರದಲ್ಲಿ ನಡೆದಿದೆ.
ಹೌದು, ಜಯನಗರದಲ್ಲಿ ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ ಆಯೋಜಿಸಿದ್ದ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಸಿಲಿಕಾನ್ ಸಿಟಿಯ ಅನೇಕ ಮಂದಿ ಭಾಗಿಯಾಗಿದ್ದರು. ಸ್ಫರ್ಧೆಯಲ್ಲಿ ಸುಮಾರು 27 ಜನ ಭಾಗಿಯಾಗಿದ್ದು, ಒಬ್ಬೊಬರಿಗೂ ಅರ್ಧ ಕೆ.ಜಿ ಯ ಮುದ್ದೆಗಳನ್ನು ನೀಡಲಾಗಿತ್ತು.
ಇನ್ನು, ಸ್ಪರ್ಧೆಯಲ್ಲಿ ಭಾಗಿಯಾದವರಿಗಿಂತ, ನೋಡಲು ಬಂದವರೇ ಹೆಚ್ಚು ನೆರೆದಿದ್ದರು. ಇವರೆಲ್ಲ ಶಿಳ್ಳೆ ಚಪ್ಪಾಳೆ ಹೊಡೆಯುತ್ತಾ ತಿನ್ನುವವರಿಗೆ ಹುರಿದುಂಬಿಸಿದ್ರು. ಸ್ಪರ್ಧೆಯಲ್ಲಿ 57 ವರ್ಷ ವಯಸ್ಸಿನ ವ್ಯಕ್ತಿ ಅರ್ಧ ಕೆ.ಜಿ ಯ ಸುಮಾರು 7 ಮುದ್ದೆಗಳನ್ನು ತಿಂದು ಮೊದಲ ಬಹುಮಾನ ಗಿಟ್ಟಿಸಿಕೊಳ್ಳುವ ಮೂಲಕ ಯುವಕರು ಕೂಡ ನಾಚುವಂತೆ ಮಾಡಿದರು.
ಸ್ಪರ್ಧೆಗೆ ಚಿತ್ರದುರ್ಗ, ತುಮಕೂರು, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ ಇತರೆ ಭಾಗಗಳಿಂದ ಸ್ಪರ್ಧಿಗಳು ಅಗಮಿಸಿದ್ರು. ಕಾರ್ಯಕ್ರಮದಲ್ಲಿ ಮುದ್ದೆಯ ಅನುಕೂಲಗಳನ್ನು ತಿಳಿಸಿ, ಫಿಜ್ಜಾ-ಬರ್ಗರ್ ಬಿಟ್ಟು ಮುದ್ದೆ ತಿನ್ನಿ ಎಂಬ ಸಲಹೆಯನ್ನು ನೀಡಲಾಯಿತು.