ಬೆಂಗಳೂರು: ನಗರದಲ್ಲಿ ಇರುವ ಕೇಂದ್ರ ಆಯುಷ್ ಇಲಾಖೆಯ ಆಯುರ್ವೇದ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯನ್ನು ಇನ್ನೆರಡು ವಾರಗಳಲ್ಲಿ 100 ಹಾಸಿಗೆಯ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ರಾಜ್ಯ ಸಹಕಾರ ಸಚಿವ ಎಸ್. ಟಿ. ಸೋಮಶೇಖರ ಅವರೊಂದಿಗೆ ಉತ್ತರಹಳ್ಳಿ ಹೋಬಳಿಯಲ್ಲಿ ಇರುವ ಆಯುಷ್ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವರು ಸಂಸ್ಥೆಯ ನಿರ್ದೇಶಕಿ ಡಾ ಸುಲೋಚನಾ ಭಟ್, ಹಿರಿಯ ಅಧಿಕಾರಿಗಳು, ಲ್ಯಾಂಡ್ ಆರ್ಮಿ ಇಂಜಿನಿಯರ್ಗಳ ಜೊತೆ ತ್ವರಿತವಾಗಿ ಇದನ್ನು ಕೋವಿಡ್ ಸೋಂಕಿತರ ಆರೈಕೆಗೆ ಸಿದ್ಧಪಡಿಸುವ ಬಗ್ಗೆ ಚರ್ಚಿಸಿದರು.
ನಂತರ ಮಾತನಾಡಿದ ಸದಾನಂದ ಗೌಡ ಅವರು, ಇನ್ನು 2 ವಾರಗಳಲ್ಲಿ ಕೋವಿಡ್ ಸೋಂಕಿತರ ಸೇವೆಗೆ ಲಭ್ಯವಾಗಲಿದೆ. 100 ಆಮ್ಲಜನಿಕ ಲಭ್ಯ ಹಾಸಿಗೆಗಳು ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಸಚಿವರು ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಇನ್ನೂ ಎರಡು ತಾತ್ಕಾಲಿಕ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು. ಚನ್ನೇನಹಳ್ಳಿಯಲ್ಲಿ ಸಂಘದ (ಆರ್ಎಸ್ಎಸ್) ಜನಸೇವಾ ವಿದ್ಯಾಕೇಂದ್ರ ಸ್ಥಾಪಿಸಿರುವ ಕೋವಿಡ್ ಆರೈಕೆ ಕೇಂದ್ರ ಹಾಗೂ ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ ಆರಂಭಿಸಿರುವ ತಾತ್ಕಾಲಿಕ ಕೋವಿಡ್ ಶುಶ್ರೂಷಾ ಕೇಂದ್ರಕ್ಕೆ ಕೂಡ ಸದಾನಂದ ಗೌಡರು ಭೇಟಿ ನೀಡಿದ ಸಂದರ್ಭದಲ್ಲಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಕೇಂದ್ರ ಸಚಿವರು ನಂದಿನಿ ಲೇಔಟ್ನಲ್ಲಿ ಅಬಕಾರಿ ಸಚಿವ ಕೆ ಗೋಪಾಲಯ್ಯ ನೇತೃತ್ವದಲ್ಲಿ ಸ್ಥಾಪಿಸಲಾದ 80-ಬೆಡ್ ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಟ್ಟುನಿಟ್ಟಾಗಿ ಲಾಕ್ಡೌನ್ ವಿಧಿಸಿದ್ದರ ಫಲವಾಗಿ ದೆಹಲಿ, ಮುಂಬೈನಂತಹ ದೊಡ್ಡ-ದೊಡ್ಡ ನಗರಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಲಾಕ್ಡೌನ್ ನಂತರ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ಮೇ 24ರ ನಂತರವೂ ಲಾಕ್ಡೌನ್ ಮುಂದುವರಿಸಬೇಕೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ಸೋಂಕಿನ ಸರಪಣಿಯನ್ನು ಮುರಿಯಬೇಕಾದ ಅವಶ್ಯಕತೆ ಇದೆ. ಮೊದಲು ಜೀವ ಉಳಿಯಬೇಕು ನಂತರ ಜೀವನ ಎನ್ನುವುದರ ಮೂಲಕ ಪರೋಕ್ಷವಾಗಿ ಲಾಕ್ಡೌಕನ್ ಮುಂದುವರಿಕೆ ಬಗ್ಗೆ ಒಲವು ವ್ಯಕ್ತಪಡಿಸಿದರು.
ಕೋವಿಡ್ ಸೋಂಕಿತರಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಮಂತ್ರಿಗಳು, ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರವು ರಾಜ್ಯಕ್ಕೆ ಆಮ್ಲಜನಕ, ರೆಮ್ಡೆಸಿವರ್ ಮತ್ತಿತರ ಔಷಧಗಳು ಸೇರಿದಂತೆ ಎಲ್ಲ ರೀತಿಯಿಂದ ನೆರವು ನೀಡುತ್ತಿದೆ. ಈ ಮಹಾಮಾರಿಯನ್ನು ಮಣಿಸಲು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಬೇಕು ಎಂದರು.