ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಗೆಲುವಿನ ನಗೆ ಬೀರಿದ್ದಾರೆ. ಸಾಕಷ್ಟು ಪೈಪೋಟಿ ನಡುವೆ ಬೆಂಗಳೂರು ಉತ್ತರದ ಉತ್ತರಾಧಿಕಾರಿಯಾಗಿ ಡಿವಿಎಸ್ ಆಯ್ಕೆಯಾಗಿದ್ದಾರೆ.
ಮೊದ ಮೊದಲು ಹಿನ್ನಡೆ ಅನುಭವಿಸಿದ್ದ ಸದಾನಂದಗೌಡ, ನಂತರದ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡರು. ಗೆಲುವು ಖಚಿತವಾದ ನಂತರ ಮತ ಎಣಿಕೆ ಕೇಂದ್ರದಿಂದ ಹೊರ ಬಂದು ಮಾಧ್ಯಮಗಳೊಂದಿಗೆ ಮಾತಾನಾಡಿದ ಡಿವಿಎಸ್, ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು. ಅಧಿಕೃತವಾಗಿ ಗೆಲುವು ಸಾಧಿಸಿದ್ದೇವೆ. ಕರ್ನಾಟಕದ ಅತ್ಯಂತ ಪೈಪೋಟಿ ಕ್ಷೇತ್ರವಾಗಿದ್ದದ್ದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ಹೀಗಾಗಿ ಸಾಕಷ್ಟು ನಿರೀಕ್ಷೆ ಇತ್ತು. ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಬರಬೇಕು ಎಂಬುದು ಜನರ ಆಸೆಯಾಗಿತ್ತು. ನನ್ನ ಈ ಗೆಲುವಿಗೆ ಪಕ್ಷದ ಕಾರ್ಯಕರ್ತರು, ನಾಯಕರು ಎಲ್ಲರ ಬೆಂಬಲವೇ ಕಾರಣ ಎಂದು ಧನ್ಯವಾದ ಹೇಳಿದರು. ಕ್ಷೇತ್ರದ ಅಭಿವೃದ್ಧಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತೇನೆ ಎಂದು ಉತ್ಸಾಹದ ಮಾತುಗಳನ್ನಾಡಿದರು.