ಬೆಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಕುರಿತು ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿದೆ. ಪರಿಷ್ಕೃತ ಪುಸ್ತಕ ಮತ್ತು ಹಿಂದಿನ ಸಮಿತಿಗಳಲ್ಲಿನ ಅಂಶಗಳನ್ನು ದಾಖಲೆ ಸಮೇತ ಸಾರ್ವಜನಿಕವಾಗಿ ಇರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ವಿಚಾರ ಕುರಿತು ಸಭೆ ನಡೆಯಿತು.
ಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದ ಡಿ.ವಿ. ಸದಾನಂದಗೌಡ, ಶಾಸಕ ರವಿ ಸುಬ್ರಮಣ್ಯ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಅಶ್ವತ್ಥ್ ನಾರಾಯಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಸೇರಿದಂತೆ ಇತರರು ಭಾಗಿಯಾಗಿದ್ದರು. ವಿವಾದದ ಬಗ್ಗೆ ಪಕ್ಷದ ನಿಲುವಿನ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಡಾ.ಮೂಡಂಬಡಿತ್ತಾಯ ಪರಿಷ್ಕರಣಾ ಸಮಿತಿ, ಬರಗೂರು ರಾಮಚಂದ್ರಪ್ಪ ಪರಿಷ್ಕರಣಾ ಸಮಿತಿ ಮತ್ತು ರೋಹಿತ್ ಚಕ್ರತೀರ್ಥ ಪರಿಷ್ಕರಣಾ ಸಮಿತಿಯ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಪರಿಷ್ಕೃತ ಪುಸ್ತಕ ಮತ್ತು ಹಿಂದಿನ ಸಮಿತಿಗಳಲ್ಲಿನ ಅಂಶಗಳನ್ನು ದಾಖಲೆ ಸಮೇತ ಸಾರ್ವಜನಿಕವಾಗಿ ಇರಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ವಿ. ಸದಾನಂದ ಗೌಡ, ಪಠ್ಯಪುಸ್ತಕ ವಿಚಾರದಲ್ಲಿ ಸತ್ಯದ ವಿಷಯ ಮರೆಮಾಚುವ ಕೆಲಸ ಆಗುತ್ತಿದೆ. ಸೋಕಾಲ್ಡ್ ಬುದ್ದಿ ಜೀವಿಗಳು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸಚಿವರು ಸಭೆಯಲ್ಲಿ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ. ಕುವೆಂಪುರವರಿಗೆ ಯಾವುದೇ ಅಪಮಾನ ಮಾಡಿಲ್ಲ, ಸುಮ್ಮನೆ ಕುವೆಂಪು ಅವರಿಗೆ ಅಪಮಾನ ಮಾಡಲಾಗುತ್ತಿದೆ ಅಂತಾ ಮಾತನಾಡುತ್ತಿದ್ದಾರೆ. ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಬರಗೂರು ರಾಮಚಂದ್ರಪ್ಪ ಸಮಿತಿ ಸೇರಿಸಿದ್ದಕ್ಕಿಂತ ಹೆಚ್ಚು ಪಠ್ಯ ಈಗ ಸೇರ್ಪಡೆ ಮಾಡಲಾಗಿದೆ. ಮೆಕಾಲೆ ಸಂಸ್ಕೃತಿ ನಮ್ಮಿಂದ ದೂರ ಆಗಬೇಕು. ರಾಷ್ಟ್ರ, ಸಂಸ್ಕೃತಿ, ಸಂಸ್ಕಾರಕ್ಕೆ ಆದ್ಯತೆ ಕೊಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬರಗೂರು ಸಮಿತಿ ಬ್ರಿಟಿಷರ ವಿರುದ್ಧದ ಹೋರಾಟಗಾರರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಆದರೆ, ಭಾರತೀಯರು ಯಾರನ್ನೂ ಪಠ್ಯದಲ್ಲಿ ಹಾಕಿರಲಿಲ್ಲ. ಇದನ್ನ ಸರಿ ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ. ಯಾರು ಏನೇ ಹೇಳಿದರೂ ನಾವು ಮುಂದೆ ಹೋಗುತ್ತೇವೆ ಎಂದರು.
ನಾಡಗೀತೆಗೆ ಅಪಮಾನ ಮಾಡಿದವರ ಮೇಲೆ ಕ್ರಮಕ್ಕೆ ಆದಿಚುಂಚನಗಿರಿ ಶ್ರೀಗಳ ಒತ್ತಾಯ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ಈಗಾಗಲೇ ಸಿಎಂ ಮತ್ತು ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶ್ರೀಗಳಿಗೆ ಮನವರಿಕೆ ಮಾಡುವ ಕೆಲಸ ಮಾಡಲಾಗುತ್ತದೆ. ಇಂದು ಸಂಜೆ ಶಿಕ್ಷಣ ಸಚಿವರೇ ಶ್ರೀಗಳನ್ನು ಭೇಟಿಯಾಗಿ ಸ್ಪಷ್ಟನೆ ನೀಡುತ್ತಾರೆ ಎಂದು ತಿಳಿಸಿದರು.
ಆರ್ಎಸ್ಎಸ್ ಬಗ್ಗೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸದಾನಂದಗೌಡರು, ಕೆಲವು ದಿನಗಳ ಹಿಂದೆ ಹೆಡ್ಗೇವಾರ್ ಬಗ್ಗೆ ಪತ್ರಿಕೆಯಲ್ಲಿ ಬಂದ ಮಾಹಿತಿಯನ್ನು ಸಿದ್ದರಾಮಯ್ಯ ಓದಿದರೆ ಅವರಿಗೆ ನಿದ್ದೆ ಬರಬಹುದು ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: UPSC Results-2021: ಮೈಸೂರಿನ ದೃಷ್ಟಿ ವಿಶೇಷ ಚೇತನೆಯ ಸಾಧನೆಗೆ ಸಲಾಂ