ಬೆಂಗಳೂರು: ಶಿವಮೊಗ್ಗ ಹೊರವಲಯದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ ದೊಡ್ಡ ಪ್ರಮಾಣದ ಸಾವು-ನೋವು ಸಂಭವಿಸಿರುವ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಭಗವಂತನು ಮೃತರ ಆತ್ಮಕ್ಕೆ ಸದ್ಗತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ದುಃಖತಪ್ತ ಕುಟುಂಬಗಳ ಜೊತೆ ನಾವೆಲ್ಲಾ ಭಾಗಿಯಾಗಿದ್ದೇವೆ ಎಂದು ಅವರು ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಣಿಗಾರಿಕೆಗೆ ಬಳಸುವ ಸ್ಫೋಟಕಗಳನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು. ಎಚ್ಚರ ತಪ್ಪಿದರೆ, ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ದುರಂತಕ್ಕೆ ಆಹ್ವಾನ ನೀಡಿದಂತಾಗಲಿದೆ. ಗಣಿಗಳಲ್ಲಿ ಬಳಸುವ ಸ್ಫೋಟಕ ಸಾಗಣೆ, ಸಂಗ್ರಹ ಮತ್ತು ಗಣಿಗಳಲ್ಲಿ ನಿಯಂತ್ರಿತವಾಗಿ ಸ್ಫೋಟಿಸುವ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇದೆ. ಇಂತಹ ದುರಂತವೇನಾದರು ಸಂಭವಿಸಿದರೆ ದೊಡ್ದ ಪ್ರಮಾಣದಲ್ಲಿ ಜೀವಹಾನಿ ಆಗುತ್ತದೆ, ಪರಿಸರಕ್ಕೆ ಧಕ್ಕೆಯಾಗುತ್ತದೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಇರುವ ಮಾರ್ಗಸೂಚಿಗಳು ಚಾಚು ತಪ್ಪದೆ ಅನುಷ್ಠಾನ ಆಗುವಂತೆ ನೋಡಿಕೊಳ್ಳಬೇಕು. ಘಟನೆ ನಂತರ ಇದಕ್ಕೆ ಕಾರಣವಾದವರನ್ನು ಶಿಕ್ಷಿಸುವುದು ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡುವುದು ಒಂದು ಭಾಗ. ಆದರೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಂಡು ಜೀವಹಾನಿ ತಪ್ಪಿಸುವುದು ಅತೀ ಮುಖ್ಯ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯಲು ಯಾವುದೇ ಅವಕಾಶ ನೀಡಬಾರದು. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.