ಬೆಂಗಳೂರು: ಹಬ್ಬದ ದಿನಗಳಲ್ಲಿ ಮೈಮರೆಯದೆ ಎಲ್ಲರೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಠಿಣ ಕೋವಿಡ್ ನಿಯಮಗಳನ್ನು ಪಾಲಿಸಿ, ಕೊರೊನಾ ನಿಯಂತ್ರಿಸೋಣ ಎಂದು ನಾಡಿನ ಜನತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ.
ವೈಕುಂಠ ಏಕಾದಶಿ ಪ್ರಯುಕ್ತ ಮುಂಜಾನೆಯೇ ವೈಕುಂಠನಾಥ ದರ್ಶನ ಪಡೆದ ಯಡಿಯೂರಪ್ಪ ಅವರು, ಕೋವಿಡ್ ನಿರ್ಬಂಧ ಹಿನ್ನೆಲೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸದೆ ಕೇವಲ ದರ್ಶನ ಪಡೆದರು. ದೇವಾಲಯದಲ್ಲಿ ದೈನಂದಿನ ಪೂಜಾ ಕಾರ್ಯಕ್ಕೆ ಮಾತ್ರ ಅವಕಾಶವಿದ್ದು, ಎಲ್ಲ ರೀತಿಯ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಅದರಂತೆ ಮುಂಜಾನೆ ಪೂಜಾ ಸಮಯದಲ್ಲಿ ಪೂಜಾ ಕೈಂಕರ್ಯವನ್ನು ವೀಕ್ಷಿಸಿ ಮಾಜಿ ಸಿಎಂ ನಿರ್ಗಮಿಸಿದರು.
ಇದನ್ನೂ ಓದಿ: ವೈಕುಂಠ ಏಕಾದಶಿ ವಿಶೇಷ: ಆನ್‌ಲೈನ್‌ನಲ್ಲಿ ಭಕ್ತರಿಗೆ ದರ್ಶನ ಭಾಗ್ಯ
ಈ ವೇಳೆ ನಾಡಿನ ಸಮಸ್ತ ಜನತೆಗೆ ಪವಿತ್ರ ವೈಕುಂಠ ಏಕಾದಶಿ ದಿನದ ಭಕ್ತಿಪೂರ್ವಕ ಶುಭಕಾಮನೆಗಳನ್ನು ಮಾಜಿ ಸಿಎಂ ಕೋರಿದರು. ಭಗವಂತನ ಅನುಗ್ರಹ ಎಲ್ಲರ ಮೇಲೆ ಸದಾ ಇರಲಿ, ಸಾಂಕ್ರಾಮಿಕವೂ ಸೇರಿದಂತೆ ಎಲ್ಲ ಸಂಕಷ್ಟಗಳು ದೂರಸರಿಯಲಿ. ಸುಖ, ಸಮೃದ್ಧಿ ಎಲ್ಲೆಡೆ ನೆಲಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ಕೋವಿಡ್ ಸುರಕ್ಷತಾ ನಿಯಮಗಳನ್ನು ಎಲ್ಲರೂ ಪಾಲಿಸೋಣ ಎಂದು ಕರೆ ನೀಡಿದರು.