ಬೆಂಗಳೂರು : ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನ ಯಲಹಂಕ ಉಪನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಹಲವು ವರ್ಷಗಳಿಂದ ಖಾಲಿಯಿರುವ ಹಾಗೂ ವಿದೇಶದಲ್ಲಿರುವ ಮಾಲೀಕರ ನಿವೇಶನಗಳನ್ನು ಗುರುತಿಸಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ, ಗ್ಯಾಂಗ್ ಕಟ್ಟಿಕೊಂಡು ವಂಚಿಸುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರದೀಪ್, ಧರ್ಮಲಿಂಗಂ, ಮಂಜುನಾಥ್, ಯಾರಬ್, ವೈ.ಆರ್ ಮಂಜುನಾಥ್, ಅಬ್ದುಲ್ ಘನಿ, ಶಭಾನ ಭಾನು ಹಾಗೂ ರೌಡಿಶೀಟರ್ ಆಟೊ ರಾಮ ಬಂಧಿತ ಆರೋಪಿಗಳು.
ಇತ್ತೀಚೆಗೆ ಯಲಹಂಕ ಉಪನಗರದ ಚಿಕ್ಕಬೊಮ್ಮಸಂದ್ರದಲ್ಲಿ ಜಯಪ್ರತಾಪ್ ರೆಡ್ಡಿ ಮಗ ಪ್ರಶಾಂತ್ ರೆಡ್ಡಿ ಹಾಲಿ ವಿದೇಶದಲ್ಲಿದ್ದು, ನಗರದಲ್ಲಿರುವ ಸೈಟ್ನಲ್ಲಿ ಮನೆ ಕಟ್ಟಲು ಮುಂದಾಗುತ್ತಿದ್ದಂತೆ, ಆರೋಪಿ ಪ್ರದೀಪ್ ಹಾಗೂ ಆತನ ಸಹಚರರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಸೈಟ್ ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ನಿವೇಶನದ ಮಾಲೀಕರಿಗೆ ಜೀವಬೆದರಿಕೆ ಹಾಕಿದ್ದರು.
ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಯಲಹಂಕ ಉಪನಗರ ಪೊಲೀಸರು ಎಂಟು ಮಂದಿ ಆರೋಪಿಗಳನ್ನ ಸದೆಬಡೆದಿದ್ದಾರೆ. ಯಲಹಂಕ, ಚಿಕ್ಕಜಾಲ ಸೇರಿದಂತೆ ವಿವಿಧ ಕಡೆಗಳಲ್ಲಿ ಹಲವು ವರ್ಷಗಳಿಂದ ಖಾಲಿಯಿರುವ ಸೈಟುಗಳನ್ನು ಗುರುತಿಸಿಕೊಳ್ಳುತ್ತಿದ್ದ ವಂಚಕರು, ನಿವೇಶನ ಯಾರ ಹೆಸರಿನಲ್ಲಿದೆ, ಮೂಲ ಸೈಟ್ನ ಮಾಲೀಕ ಯಾರು ಎಂದು ತಿಳಿದುಕೊಳ್ಳುತ್ತಿದ್ದರು.
ನಂತರ 50 ವರ್ಷಗಳ ಹಳೆ ಛಾಪಕಾಗದ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯ ನಕಲಿ ಸೀಲ್‌ಗಳನ್ನು ಬಳಸಿ ಬೇರೆಯವರ ಹೆಸರಿನಲ್ಲಿ ಸೆಲ್ ಡಿಡ್, ಅಗ್ರಿಮೆಂಟ್‌ಗಳನ್ನು ತಯಾರಿಸಿಕೊಂಡು ಸೈಟ್ ಮಾರಾಟ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ 8 ಪ್ರಕರಣ ಬೆಳಕಿಗೆ ಬಂದಿವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿ ನಟೋರಿಯಸ್ ರೌಡಿಶೀಟರ್ ರಾಮಯ್ಯ ಅಲಿಯಾಸ್ ಆಟೋ ರಾಮ ಕುಮ್ಮಕ್ಕಿನಿಂದ ಉಳಿದ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಆರೋಪಿಗಳ ಬಂಧನದಿಂದ ಸುಮಾರು ಎರಡು ಕೋಟಿ ಹಣದ ವ್ಯವಹಾರ ಬಯಲಿಗೆ ಬಂದಂತಾಗಿದೆ.