ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿಯೇ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಅ. 28 ರಂದು ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಹಿರಿಯೂರು ಬಿಜೆಪಿ ಶಾಸಕಿಯಾಗಿರುವ ಪೂರ್ಣಿಮ ಶ್ರೀನಿವಾಸ್ ಅವರ ಪತಿ ಡಿ.ಟಿ.ಶ್ರೀನಿವಾಸ್ ಪಕ್ಷೇತರರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಶಾಂತಿನಗರದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.
ಆಗ್ನೇಯ ಪದವೀಧರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಶ್ರೀನಿವಾಸ್‌ಗೆ ಟಿಕೆಟ್ ನಿರಾಕರಿಸಿ, ಚಿದಾನಂದಗೌಡಗೆ ಬಿಜೆಪಿ ಟಿಕೆಟ್ ಅಂತಿಮಗೊಳಿಸಿತ್ತು. ನಾಳೆ ಬಿಜೆಪಿ ಅಭ್ಯರ್ಥಿಯಾಗಿ ಚಿದಾನಂದ ಗೌಡ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಇವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಒಂದು ದಿನ ಮೊದಲೇ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದಾರೆ.
ಮಾಸ್ಕ್ ಕ್ಯಾಂಪೇನ್:
ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಭ್ಯರ್ಥಿಯಿಂದ ಮಾಸ್ಕ್ ಕ್ಯಾಂಪೇನ್ ನಡೆಯಿತು. ತಮ್ಮ ಬೆಂಬಲಿಗರಿಗೆ ಅಭ್ಯರ್ಥಿ ಹೆಸರು ಮುದ್ರಣವಾಗಿರುವ ಮಾಸ್ಕ್‌ಗಳನ್ನು ವಿತರಿಸಿ ಶ್ರೀನಿವಾಸ್ ಗಮನ ಸೆಳೆದರು.