ಬೆಂಗಳೂರು : ನಗರದಲ್ಲಿ ವಾರಾಂತ್ಯದ ವೇಳೆಗೆ ಪುಂಡರ ಹಾವಳಿ ಮಿತಿ ಮೀರುತ್ತಿದೆ. ಮದ್ಯದ ನಶೆಯಲ್ಲಿದ್ದ ಯುವಕರ ಗುಂಪೊಂದು ನಡು ರಸ್ತೆಯಲ್ಲಿ ಬಡಿದಾಡಿಕೊಂಡ ಘಟನೆ ಭಾನುವಾರ ತಡರಾತ್ರಿ 11 ಗಂಟೆ ಸುಮಾರಿಗೆ ಕ್ವೀನ್ಸ್ ರಸ್ತೆಯಲ್ಲಿ ನಡೆದಿದೆ. ಕಂಠಪೂರ್ತಿ ಕುಡಿದು ಪಬ್ನಿಂದ ಹೊರಬಂದ ನಾಲ್ಕೈದು ಜನ ಯುವಕರ ಗುಂಪು ಗಲಾಟೆ ಮಾಡಿಕೊಂಡು ರಸ್ತೆ ಮೇಲೆ ಬಿದ್ದು ಹೊರಳಾಡಿದ್ದಾರೆ.
ಯುವಕರ ಜಗಳ ಬಿಡಿಸಲು ಪಬ್ ಬೌನ್ಸರ್ಗಳು ಹಾಗೂ ಸಾರ್ವಜನಿಕರು ಹರಸಾಹಸಪಟ್ಟಿದ್ದಾರೆ. ಪುಂಡರ ವರ್ತನೆಯಿಂದ ಇತರೆ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದ್ದು, ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ, ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಧಾನಸೌಧ ಠಾಣೆ ಪೊಲೀಸರು ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ನೀವು ನಿತ್ಯ ಮದ್ಯ ಸೇವನೆ ಮಾಡ್ತೀರಾ .. ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಇರುತ್ತೆ.. ಇರಲಿ ಜಾಗ್ರತೆ !
ಇನ್ನು, ಮದ್ಯದ ಮತ್ತಿನಲ್ಲಿದ್ದ ಯುವತಿಯೊಬ್ಬಳು ತೂರಾಡುತ್ತ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ ಘಟನೆ ಕಳೆದ ಶನಿವಾರ ರಾತ್ರಿ ಚರ್ಚ್ ಸ್ಟ್ರೀಟ್ನಲ್ಲಿ ನಡೆದಿತ್ತು. ಬುದ್ಧಿ ಹೇಳಲು ಹೋದವರ ಮೇಲೆಯೇ ಮುಗಿ ಬೀಳುತ್ತಿದ್ದ ಯುವತಿಯನ್ನು ಸಂಭಾಳಿಸುವಲ್ಲಿ ಪೊಲೀಸರು ಹೈರಾಣಾಗಿದ್ದರು. ಕೊನೆಗೆ ಸ್ಥಳದಲ್ಲಿದ್ದ ಇತರೆ ಯುವತಿಯರ ನೆರವಿನಿಂದ ಆಕೆಯನ್ನು ಮನೆಗೆ ತಲುಪಿಸಲಾಗಿತ್ತು.
ಇದನ್ನೂ ಓದಿ : ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಮದ್ಯದ ಅಮಲಿನಲ್ಲಿದ್ದ ಯುವತಿಯ ರಂಪಾಟ.. ಮನೆಗೆ ತಲುಪಿಸುವಷ್ಟರಲ್ಲಿ ಪೊಲೀಸರು ಹೈರಾಣ
ಕಳೆದ ತಿಂಗಳು ಸಹ ಇಂತಹದೇ ಘಟನೆ ನಡೆದಿತ್ತು. ಕೇಂದ್ರ ವಿಭಾಗದ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲ ವಿದೇಶಿ ಪ್ರಜೆಗಳು ಭಾರಿ ಹೈಡ್ರಾಮಾ ನಡೆಸಿರುವ ಪ್ರಸಂಗ ಜರುಗಿತ್ತು. ಪೊಲೀಸರು ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಕೆಲವರು ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಓಡಿ ಹೋಗಿದ್ದರು. ಇನ್ನೂ ಕೆಲವರು ಮದ್ಯದ ಅಮಲಿನಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು.
ಇದನ್ನೂ ಓದಿ : Hassan crime : ಮದ್ಯ ಸೇವಿಸಿದ ವಿಷಯವನ್ನು ತಂದೆಗೆ ತಿಳಿಸಿದ ಸ್ನೇಹಿತನ ಕೊಲೆ ; ಇಬ್ಬರು ಸೆರೆ
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಉಡುಪಿಯಲ್ಲಿ ಇಂತಹದೇ ಪ್ರಕರಣ ನಡೆದಿತ್ತು. ಯುವಕ ಯುವತಿ ಇಬ್ಬರು ಮದ್ಯ ಸೇವನೆ ಮಾಡಿ ಪಿಜ್ಜಾ ಶಾಪ್ಗೆ ಬಂದು ಸಾರ್ವಜನಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಇಬ್ಬರನ್ನ ಹೊರಕ್ಕೆ ಕಳುಹಿಸಿದ್ದರು. ಆದರೆ ಮದ್ಯದ ಅಮಲಿನಲ್ಲಿದ್ದ ಯುವತಿ ಶಾಪ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದು, ಅಲ್ಲೇ ಇದ್ದ ಸಾರ್ವಜನಿಕರು ನಶೆ ಇಳಿಸಲೆಂದು ಆಕೆಯ ತಲೆ ಮೇಲೆ ತಣ್ಣೀರು ಹಾಕಿ ಹೊರಗೆ ಕಳುಹಿಸಿದ್ದರು. ಬಳಿಕ ಯುವತಿ ತನ್ನೊಂದಿಗೆ ಇದ್ದ ಯುವಕನಿಗೂ ಚಪ್ಪಲಿಯಿಂದ ಹೊಡೆದಿದ್ದಳು. ಕೊನೆಗೆ ಆಕೆಯನ್ನು ಮಣಿಪಾಲ ಠಾಣಾ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದಾಗ ಆಕೆ ಮೂಲತಃ ಬೇರೆ ರಾಜ್ಯದವಳು ಎಂಬ ವಿಚಾರ ತಿಳಿದುಬಂದಿತ್ತು.