ಬೆಂಗಳೂರು: ಮಾದಕ ವಸ್ತುಗಳ ವಿರುದ್ಧ ಸಿಸಿಬಿ ಸಮರ ಮುಂದುವರೆದಿದ್ದು, ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ನಾನ್ಸೋ ಜಾನ್ ಮತ್ತು ಟ್ರೌರಿ ಬೆನ್ ಬಂಧಿತರು. ಈ ಆರೋಪಿಗಳು ರಾಮಮೂರ್ತಿ ನಗರದ ಮುಖ್ಯ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡಲು ಸಂಚು ರೂಪಿಸಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ ದಾಳಿ ನಡೆಸಿದ್ದು, ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಎಕ್ಟೆಸಿ, ಎಲ್ಎಸ್ಡಿ ಸ್ಟ್ರಿಪ್ಸ್ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸಲು ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 134 ಎಕ್ಟೆಸಿ ಮಾತ್ರೆಗಳು ಹಾಗೂ 25 ಎಲ್ಎಸ್ಡಿ ಸ್ಟ್ರಿಪ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ವಿಚಾರಣೆ ವೇಳೆ ಕೆಲ ವಿಚಾರ ಬಯಲಿಗೆ ಬಂದಿದೆ. ಆರೋಪಿಗಳು ಮೆಡಿಕಲ್ ಅಟೆಂಡೆನ್ಸ್ ಅಡಿ ವೀಸಾ ಪಡೆದು ಭಾರತಕ್ಕೆ ಬಂದಿದ್ದಾರೆ. ಪಾಸ್ಪೋರ್ಟ್, ವೀಸಾ ನಿಯಮ ಉಲ್ಲಂಘಿಸಿ ಕಾನೂನು ಬಾಹಿರ ಚಟುವಟಿಕೆಳನ್ನು ಮಾಡುತ್ತಿದ್ದರು. ಬಂಧಿತ ಆರೋಪಿಗಳು 2017ರಿಂದ ಇಲ್ಲಿಯವರೆಗೆ ಇದೇ ಕೆಲಸ ಮಾಡಿಕೊಂಡಿದ್ದು, ಈಗಾಗಲೇ ಆರೋಪಿಗಳ ವಿರುದ್ಧ ರಾಮಮೂರ್ತಿನಗರ, ಕೆಆರ್ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲು ಪಾಲಾಗಿ ಮತ್ತೆ ಅದೇ ದಂಧೆ ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.