ಬೆಂಗಳೂರು: ಡಿಸಿಎಂ ಡಾ. ಅಶ್ವಥ್ ನಾರಾಯಣ ಕ್ಷೇತ್ರದಲ್ಲೇ ಮಾದಕ ವಸ್ತುಗಳ ಚಟಕ್ಕೆ ಇಬ್ಬರು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಸರಬರಾಜಿಗೆ ಕಡಿವಾಣ ಹಾಕಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಆದರೆ, ನಿನ್ನೆ ವೈಯಲಿ ಕಾವಲ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಅಸಹಜವಾಗಿ ಮೃತಪಟ್ಟಿದ್ದರು. ಈ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರಿಗೆ ಯುವಕರು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಭಿಲಾಷಿ ಹಾಗೂ ಗೋಪಿ, ಸುಮಾನ್ ಯುವಕರ ತಂಡ ಸ್ನೇಹಿತನ ಬರ್ತ್ ಡೇ ಪಾರ್ಟಿ ಮಾಡಿ, ಬಳಿಕ ಟೈ ಡಾಲ್ ಎಂಬ ಮಾತ್ರೆ ಸೇವನೆ ಮಾಡಿದ್ದಾರೆ. ಟೈ ಡಾಲ್ ಎಂಬುದು ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ನಂತರ ನೋವು ನಿವಾರಣೆಗಾಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಆಪರೇಷನ್ ತರುವಾಯ ನೋವು ಕಡಿಮೆಯಾಗಲು ಇದನ್ನ ನೀಡುತ್ತಾರೆ. ಆದ್ರೆ, ಈ ಯುವಕರ ಗುಂಪು ಟೈ ಡಾಲ್ ಮಾತ್ರೆಯನ್ನು ಐದರಿಂದ ಆರು ಮಾತ್ರೆ ತೆಗೆದುಕೊಂಡು ಅದನ್ನ ಕ್ರಷ್ ಮಾಡಿದ ಬಳಿಕ ಡಿಸ್ಟಿ ವಾಟರ್ನಲ್ಲಿ ಬೆರೆಸಿ ಇಂಜೆಕ್ಟ್ ಮಾಡಿಕೊಂಡಿದ್ದಾರೆ.
ಬಳಿಕ ಮನೆಗೆ ಹೋಗಿ ತಲೆ ನೋವು, ಫುಡ್ ಪಾಯ್ಸನ್ ಆಗಿದೆ ಎಂದು ಪೋಷಕರ ಬಳಿ ಹೇಳಿ ಆಸ್ಪತ್ರೆಗೆ ಸೇರಿದ್ದಾರೆ. ಆದ್ರೆ ವೈದ್ಯರು ಪರಿಶೀಲನೆ ನಡೆಸಿದಾಗ ಮೂವರು ಯುವಕರು ಟೈ ಡಾಲ್ ಎಂಬ ಮಾತ್ರೆಯನ್ನ ಓವರ್ ಡೋಸ್ ಆಗಿ ತೆಗೆದುಕೊಂಡಿರುವುದು ತಿಳಿದುಬಂದಿದೆ. ಆದ್ರೆ ನಿನ್ನೆ ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಡಿಸಿಎಂ ಮಾತ್ರ ಏನು ಗೊತ್ತಿಲ್ಲದ ಹಾಗೆ ಇದ್ದಾರೆ. ಇನ್ನಾದರೂ ಡಿಸಿಎಂ ಅಶ್ವತ್ಥ ನಾರಾಯಣ ಅವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಚುಟುವಟಿಕೆಗಳತ್ತ ಗಮನ ಹರಿಸಲಿ ಅನ್ನೋ ಕೂಗು ಕೇಳಿ ಬಂದಿದೆ. ಸದ್ಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಕೇಸ್ ದಾಖಲಿಸಿಕೊಳ್ಳಲಾಗಿದೆ.