ಬೆಂಗಳೂರು: ಒಂದು ಕಡೆ ನಗರ ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರುತ್ತಿದ್ದರೆ, ಮತ್ತೊಂದೆಡೆ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಡ್ರಗ್ಸ್ ಪಾರ್ಟಿಗಳು ಮುಂದುವರೆದಿವೆ. ಈ ಸಂಬಂಧ ನಾಲ್ವರನ್ನು ಜೆ.ಪಿ.ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೊಹಮದ್ ಮುಜಾಮಿಲ್, ಸೈಯದ್ ಶೋಯಾಬುದ್ದೀನ್, ರವಿಕುಮಾರ್ ಹಾಗೂ ವಿದೇಶಿ ಪ್ರಜೆ ವಿದೇಶಿ ಪ್ರಜೆ ಡೋಸೊ ಖಲೀಫಾ ಎಂಬುವರನ್ನು ಬಂಧಿಸಲಾಗಿದೆ. ಇವರು ಹೋಟೆಲ್ನಲ್ಲಿ ರೂಂ ಬುಕ್ ಮಾಡಿ ಮಾದಕ ವಸ್ತು ಸೇವಿಸಿ ನಶೆಯಲ್ಲಿ ತೇಲುತ್ತಿದ್ದರು. ಜೊತೆಗೆ ಯುವ ಜನರನ್ನು ಟಾರ್ಗೆಟ್ ಮಾಡಿ ಗಾಂಜಾ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೆ.ಪಿ.ನಗರ ಠಾಣಾ ವ್ಯಾಪ್ತಿಯಲ್ಲಿರುವ ಔರಿಕ್ ಬೌಂಟಿಕ್ ಎಂಬ ಪ್ರತಿಷ್ಠಿತ ಹೋಟೆಲ್ ಮೇಲೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಪೈಕಿ ರವಿ ಎಂಬಾತ ಬಿಡಿಎ ಬ್ರೋಕರ್. ಮೊಹಮದ್ ಮುಜಾಮಿಲ್ ಎಂಬಾತ ಕಳೆದ ನಾಲ್ಕು ವರ್ಷದಿಂದ ಶ್ರೀಲಂಕಾದ ಟೂರಿಸ್ಟ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದಲೇ ಡ್ರಗ್ಸ್ ಜಾಲದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ. ಕೋವಿಡ್ ಬಳಿಕ ನೇರವಾಗಿ ಬೆಂಗಳೂರಿಗೆ ಬಂದಿದ್ದ ಈತನಿಗೆ ಪರಿಚಯವಾದನೇ ಬಿಡಿಎ ರವಿ. ಬ್ರೋಕರ್ ಆಗಿರುವ ರವಿ ಆಗಾಗ್ಗೆ ಕೊಲೊಂಬೋಗೆ ಹೋಗಿ ಡ್ರಗ್ಸ್ ಪಾರ್ಟಿ ಮಾಡ್ತಿದ್ದ ಎನ್ನಲಾಗ್ತಿದೆ.
ಮತ್ತೋರ್ವ ಆರೋಪಿ ಫುಟ್ ಬಾಲ್ ಆಟಗಾರ ಡೋಸೊ ಖಲೀಫಾ 2015 ರಲ್ಲಿ ಸ್ಪೋರ್ಟ್ಸ್ ವೀಸಾದಲ್ಲಿ ಬಂದವನು. ವೀಸಾ ಅವಧಿ ಮುಗಿದರೂ ದೇಶದಲ್ಲಿಯೇ ಠಿಕಾಣಿ ಹೂಡಿದ್ದ. 2018ರಲ್ಲಿ ನಗರಕ್ಕೆ ಬಂದವನು ಡ್ರಗ್ಸ್ ಪೆಡ್ಲಿಂಗ್ನಲ್ಲಿ ಸಕ್ರಿಯನಾಗಿದ್ದ. ಇವರೆಲ್ಲರೂ ಡ್ರಗ್ಸ್ ದಂಧೆಯಲ್ಲೇ ಒಬ್ಬರಿಗೊಬ್ಬರು ಪರಿಚಯವಾದವರು. ಗಣ್ಯರಿಗೆ ಡ್ರಗ್ಸ್ ಪೂರೈಸುವ ಮುಖಾಂತರ ನಂಟು ಇಟ್ಟುಕೊಂಡಿದ್ದರು ಎಂದು ಹೇಳಲಾಗ್ತಿದೆ.
ಓದಿ: ಡ್ರಗ್ಸ್ ದಂಧೆ: 1.39 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ
ಗೌಪ್ಯವಾಗಿ ಸ್ಟಾರ್ ಹೋಟೆಲ್ಗಳಲ್ಲಿ ನಡೆಯುವ ಈ ಪಾರ್ಟಿಗಳ ಮೇಲೆ ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ. ಫುಡ್ ಸಪ್ಲೈ ಮಾಡುವ ರೀತಿಯಲ್ಲಿ ಡ್ರಗ್ಸ್ ಸಪ್ಲೈ ಮಾಡೋ ಈ ಖದೀಮರ ಜಾಲವನ್ನ ಭೇದಿಸಿದ ಪೊಲೀಸರು ಆರೋಪಿಗಳಿಂದ ಮತ್ತಷ್ಟು ಸತ್ಯವನ್ನು ಹೊರಗೆಳೆಯುತ್ತಿದ್ದಾರೆ.
ಸದ್ಯ ಬಂಧಿತರಿಂದ 14.84 ಗ್ರಾಂ ಕೊಕೇನ್ ಮತ್ತು 15 ಗ್ರಾಂ ಮಾದಕ ಟ್ಯಾಬ್ಲೆಟ್ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಕೃತ್ಯಕ್ಕೆ ಬಳಸುತ್ತಿದ್ದ 6 ಮೊಬೈಲ್, 96 ಸಾವಿರ ರೂ.ನಗದು, ಒಂದು ಬಿಎಂಡಬ್ಲ್ಯೂ ಕಾರು ಹಾಗೂ ಒಂದು ಬೈಕ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.