ಬೆಂಗಳೂರು: ನಗರದ ದಕ್ಷಿಣ ವಿಭಾಗದ ವಿ.ವಿ.ಪುರಂ ಹಾಗೂ ಜಯನಗರ ಠಾಣೆ ಪೊಲೀಸರು 8 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಐವರು ವಿದೇಶಿ ಆರೋಪಿಗಳನ್ನು ಬಂಧಿಸಲಾಗಿದೆ. ಲಾರೆನ್ಸ್, ಚುಕ್ವೂನೇಮ್, ಹಸ್ಲೆ, ಫ್ರಾಂಕ್ ಜಾಗೂ ಹಾಗು ಇಮ್ಯಾನ್ಯುಲ್ ನಾಝಿ ಬಂಧಿತರು.
ಇಬ್ಬರು ವಿದೇಶಿಗರು ಮೆಟ್ರೋ ಸ್ಟೇಷನ್ ಸಮೀಪ ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ್ದ ವಿ.ವಿ.ಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ವಲ್ಪ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳ ಬಳಿ ವೈಟ್ ಎಂಡಿಎಂಎ, ಬ್ರೌನ್ ಎಂಡಿಎಂಎ ಹಾಗೂ 300 ಗ್ರಾಂ ಕೊಕೈನ್ ಪತ್ತೆಯಾಗಿತ್ತು.
ಸಿಂಥೆಟಿಕ್ ಡ್ರಗ್ಸ್ ಮಾದರಿಯ ದುಬಾರಿ ಡ್ರಗ್ಸ್ಗಳಲ್ಲಿ ಇವುಗಳು ಪ್ರಮುಖವಾಗಿದ್ದು, ಬೆಲೆ ಏಳು ಕೋಟಿ ರೂ ಎಂದು ಅಂದಾಜಿಸಲಾಗಿದೆ. ಇದೇ ರೀತಿ ಜಯನಗರ ಠಾಣೆ ಪೊಲೀಸರು ಖಚಿತ ಮಾಹಿತಿ ಅಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು 1 ಕೋಟಿ 20 ಲಕ್ಷ ರೂ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿದ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, "ಮಾದಕ ವಸ್ತುಗಳ ವಿರುದ್ಧ ನಮ್ಮ ಕಾರ್ಯಚರಣೆ ಮುಂದೆವರೆಯುತ್ತಿದೆ, ಇದರ ಅಂಗವಾಗಿ ಚುನಾವಣಾ ಸಮಯದಲ್ಲು ಮಾಧಕ ವಸ್ತುಗಳ ಸಾಗಣೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಚುನಾವಣಾ ಅಯೋಗದಿಂದ ಸೂಚನೆ ಇವೆ. ಅದರಂತೆ ಜಯನಗರ ಮತ್ತು ವಿವಿಪುರ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದರು.
"ಒಟ್ಟು 5 ಜನ ವಿದೇಶಿ ಪ್ರಜೆಗಳಿಂದ ಸುಮಾರು 8 ಕೋಟಿ ರೂ ಬೆಲೆ ಬಾಳುವ ಮಾಧಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, ಬಂಧಿತ ವಿದೇಶಿ ಪ್ರಜೆಗಳು ತಮ್ಮ ವಿಸಾ ಅವಧಿ ಮುಗಿದಿದ್ದವರಾಗಿದ್ದು, ಐದು ಜನರ ಪೈಕಿ ಮೂರು ಜನರು ಈ ಮೊದಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು, ಜಾಮೀನಿನ ಮೇಲೆ ಆಚೆ ಬಂದು ಮತ್ತೆ ಈ ಚಟುವಟಿಕೆಯಲ್ಲಿ ತೊಡಗಿದ್ದಾರೆ" ಎಂದು ಮಾಹಿತಿ ನೀಡಿದರು.
ಬಾಂಗ್ಲಾ ಪ್ರಜೆಗಳ ಬಂಧನ: ಅಕ್ರಮವಾಗಿ ಭಾರತೀಯ ಪಾಸ್‌ಪೋರ್ಟ್ ಮೂಲಕ ಬಾಂಗ್ಲಾದೇಶದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಲಿಯಾಕತ್ ಅಲಿ ಮತ್ತು ರಿಜಾಉಲ್ ಶೇಖ್ ಬಂಧಿತರು. ಇವರು ಏಪ್ರಿಲ್ 2 ರಂದು ಸಿಂಗಾಪುರ್‌ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಬಂದಿಳಿದಿದ್ದರು. ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬಂಧಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳಾದ ರಿಯಾಕತ್ ಆಲಿಯು ಲಿಯಾಕತ್ ಶೇಖ್ ಮತ್ತು ರಿಜಾಉಲ್ ಶೇಕ್ ಎಂಬಾತ ರೀಗನ್ ಶೇಖ್ ಎಂಬ ಹೆಸರಿನಲ್ಲಿ ಭಾರತೀಯ ಪಾಸ್‌ಪೋರ್ಟ್ ಪಡೆದು ಬೆಂಗಳೂರಿಗೆ ಬಂದಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕ ವಸ್ತು ಮಾರಾಟ: 11 ಮಂದಿ ಬಂಧನ