ಬೆಂಗಳೂರು: ಕನ್ನಡ ಚಲನಚಿತ್ರದ ನಟ ನಟಿಯರು, ಮ್ಯೂಜಿಕ್ ಡೈರೆಕ್ಟರ್ಗಳು ಹಾಗೂ ಕಿರುತೆರೆ ಕಲಾವಿದರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವುದರಲ್ಲಿ ಎನ್ಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಸದ್ಯ ತನಿಖೆ ಚುರುಕುಗೊಳಿಸಿದ್ದಾರೆ.
ಡ್ರಗ್ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿ ಅನಿಕಾಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಎನ್ಸಿಬಿ ಪೊಲೀಸರು ತನಿಖೆಗೆ ಒಳಪಡಿಸಿದಾಗ ಬಂಧಿಸಿ ಹತ್ತು ಗಂಟೆಯ ಬಳಿಕ ಮಾಯಾ ಲೋಕದಿಂದ ಹೊರ ಬಂದು ತನಿಖಾಧಿಕಾರಿಗಳ ಜೊತೆ ಡ್ರಗ್ ಜಾಲದ ಕುರಿತು ಬಾಯಿಬಿಟ್ಟಿದ್ದಾಳೆ. ಆರೋಪಿ ಅನಿಕಾ ಆರು ವರ್ಷಗಳಿಂದ ಡ್ರಗ್ ಮಾರಾಟ ಮಾಡುತ್ತಿದ್ದಳು. ಈಕೆ ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ತನ್ನದೇ ಗ್ಯಾಂಗ್ ಸೃಷ್ಟಿ ಮಾಡಿಕೊಂಡು ದಂಧೆ ನಡೆಸುತ್ತಿದ್ದಳು ಎನ್ನಲಾಗಿದೆ. ಅನಿಕಾ ಕೂಡ ಸಿಕ್ಕಾಪಟ್ಟೆ ಡ್ರಗ್ ಸೇವಿಸುತ್ತಾಳೆ ಎಂದು ತಿಳಿದು ಬಂದಿದೆ. ಅಲ್ಲದೆ ಆಕೆ ಬಂಧಿತಳಾದ ವೇಳೆಯೂ ಕೂಡ ಡ್ರಗ್ ಸೇವನೆ ಮಾಡಿರುವ ವಿಚಾರ ಬಯಲಾಗಿದೆ. ಸದ್ಯ ಬಂಧನದ ಬಳಿಕ ಡ್ರಗ್ ನಶೆಯಿಂದ ಹೊರ ಬಂದು ಮಾದಕ ಲೋಕದ ಒಂದಿಷ್ಟು ವಿಷಯಗಳನ್ನು ಬಾಯ್ಬಿಟ್ಟಿದ್ದಾಳೆ.
ಸ್ಟಾರ್ ಹೋಟೆಲ್, ಮಾಲ್ಗಳಲ್ಲಿ ಮಾರಾಟ:
ಅನಿಕಾ ಜಾಲ ಬಹಳ ದೊಡ್ಡದಾಗಿದ್ದು, ಈಕೆ ಹೈಫೈ ಜೀವನ ನಡೆಸುತ್ತಿದ್ದಳು. ಹಾಗೆಯೇ ಹೈಫೈ ಕಾರು ಹೊಂದಿದ್ದು, ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದಳು. ಈಕೆ ಸ್ಯಾಂಡಲ್ವುಡ್ ಸ್ಟಾರ್ ನಟರಿಗೆ ಡ್ರಗ್ಅನ್ನು ಹೋಟೆಲ್, ಮಾಲ್ಗಳಲ್ಲಿ ಸಪ್ಲೆ ಮಾಡುತ್ತಿದ್ದಳಂತೆ. ತನಿಖೆ ವೇಳೆ ಅನಿಕಾ, ಮುಂಬೈ, ಜರ್ಮನಿ, ಬೆಲ್ಜಿಯಂ ಮೂಲದಿಂದ ಚಾಕೊಲೇಟ್ ಮಾದರಿಯ ಎಲ್ಎಸ್ಡಿ ಹಾಗೂ ಎಂಡಿ, ಎಂಎ ಮಾದಕ ವಸ್ತುಗಳನ್ನು ಇತರೆ ಡ್ರಗ್ ಪೆಡ್ಲರ್ಸ್ಗಳಿಂದ ತರಿಸುತ್ತಿದ್ದಾಗಿ ತಿಳಿಸಿದ್ದಾಳೆ.
ಸದ್ಯ ಆಕೆ ಯಾರಿಗೆಲ್ಲಾ ಡ್ರಗ್ ಸಪ್ಲೈ ಮಾಡುತ್ತಿದ್ದಳು, ಈ ಜಾಲದಲ್ಲಿ ಇನ್ನೂ ಯಾವ ಯಾವ ಪ್ರಭಾವಿಗಳು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿಯನ್ನು ಎನ್ಸಿಬಿ ಪೊಲೀಸರು ಕಲೆಹಾಕುತ್ತಿದ್ದಾರೆ.