ಬೆಂಗಳೂರು : ರಾಜಧಾನಿಯಲ್ಲಿ ಮಾದಕವಸ್ತು ಸರಬರಾಜಿನ ಕಬಂಧಬಾಹು ಚಾಚುತ್ತಲೇ ಇದ್ದು, ಪೊಲೀಸರು ಬಗೆ ಬಗೆಯ ಡ್ರಗ್ಸ್ ಜಪ್ತಿ ಮಾಡಿಕೊಳ್ಳುತ್ತಿದ್ದಾರೆ. ಮಾದಕಲೋಕದಲ್ಲಿ ನೂತನ ಶೈಲಿಯ ಡ್ರಗ್ಸ್ ಜಾಲದ ಹಿಂದೆ ಬಿದ್ದಿದ್ದ ವಿವಿ ಪುರ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.
ಜ್ಯೂಸ್ ಮಾದರಿಯಲ್ಲಿ ರೆಡಿ ಆಗ್ತಿರುವ ಕಿಕ್ಕೇರಿಸುವ ಡ್ರಗ್ಸ್ ಜಾಲದ ಸದಸ್ಯನೋರ್ವ ವಿವಿಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರಾಜಸ್ಥಾನ ಮೂಲದ ಗುನಾಂ ಸಿಂಗ್ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಆರೋಪಿಯ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು 55 ಕೆಜಿ ತೂಕದ 60 ಲಕ್ಷದ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಚುರುಕುಗೊಳಿಸಿದ್ದಾರೆ.
ಈ ಮಾದಕ ಪದಾರ್ಥ ಒಂದು ಅಫೀಮು ಸಸ್ಯ. ಇದನ್ನು ಹೆಚ್ಚಾಗಿ ರಾಜಸ್ಥಾನದಲ್ಲಿ ಬೆಳೆಯಲಾಗುತ್ತದೆ. ಇದರಿಂದ ಅಫೀಮು ತಯಾರು ಮಾಡಿ ಲಕ್ಷ ಲಕ್ಷ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಡ್ರಗ್ಸ್ ಅನ್ನು ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಿ ಕೋಟಿ ಕೋಟಿ ವ್ಯವಹಾರ ನಡೆಸಲಾಗುತ್ತದೆ.
ಡ್ರಗ್ಸ್ ಅನ್ನು ನೀರಿನಲ್ಲಿ ಬೆರೆಸಿ ಪಾರ್ಟಿಯಲ್ಲಿ ಬಳಕೆ: ಮೊದಲಿಗೆ ತೋಟದಲ್ಲಿ ಅಫೀಮು ಗಿಡ ಬೆಳೆಸಲಾಗುತ್ತೆ. ಅದೇ ಗಿಡ ದೊಡ್ಡದಾದ ಬಳಿಕ ಗಿಡದಲ್ಲಿ ಬಿಡೋ ಕಾಯಿಯನ್ನು ಬ್ಲೇಡ್ನಿಂದ ಕೆರೆದು ಅದರಿಂದ ಬರುವ ಹಾಲನ್ನ ಸಂಗ್ರಹ ಮಾಡಲಾಗುತ್ತೆ. ಅದೇ ಅಫೀಮು. ಅದೇ ಡ್ರಗ್ಸ್ ಅನ್ನ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತೆ. ನಂತರ ಆ ಕಾಯಿಯನ್ನು ಕತ್ತರಿಸಿ ತರುವ ಆರೋಪಿಗಳು ಅದನ್ನ ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಅದನ್ನ ಎರಡು ದಿನಗಳ ಕಾಲ ನೀರಿನಲ್ಲಿ ಹಾಕಿ ನೆನೆಸುತ್ತಾರೆ. ನಂತರ ಅದರ ಪುಡಿಯನ್ನ ಬಟ್ಟೆಯಲ್ಲಿ ಸೋಸಿ ಬಾಟಲ್ನಲ್ಲಿ ಶೇಖರಿಸಲಾಗುತ್ತೆ. ನಂತರ ಆ ಬಾಟಲ್ ನೀರನ್ನು ಸಾಮಾನ್ಯ ನೀರಿನ ಜೊತೆಗೆ ಬೆರೆಸಿ ಪಾರ್ಟಿಗಳಲ್ಲಿ ಬಳಸುತ್ತಾರೆ.
ಈ ಡ್ರಗ್ಸ್ ಶೇಖರಣೆ ಮಾಡಲಾಗಿದ್ದ ಗೋಡೌನ್ ಮೇಲೆ ದಾಳಿ: 100 ಲೀಟರ್ ಸಾಮಾನ್ಯ ನೀರಿನ ಜೊತೆಗೆ ಒಂದು ಲೀಟರ್ ಈ ಮಾದಕ ದ್ರಾವಣವನ್ನು ಬೆರೆಸಲಾಗುತ್ತೆ. ಈ ನೀರು ಹೆಚ್ಚಾಗಿ ಘಾಟು ಇರೋದರಿಂದ ವಿವಿಧ ಕಂಪನಿಗಳ ಜ್ಯೂಸ್ ನೊಳಗೆ ಬೆರೆಸಿ ಕೊಡುತ್ತಿದ್ದರು. ಹೀಗೆ ಬೆಂಗಳೂರಿನ ವಿವಿ ಪುರಂನಲ್ಲಿ ಶೇಖರಣೆ ಮಾಡಲಾಗಿದ್ದ ಗೋಡೌನ್ ಮೇಲೆ ದಾಳಿ ಮಾಡಿದ ವಿವಿ ಪುರಂ ಪೊಲೀಸರು ಅರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಮೀಟರ್.. ಕೆಜಿ ಈತನ ಕೋಡ್ವರ್ಡ್: ರಾಜಸ್ಥಾನ ಮೂಲದ ಆರೋಪಿಯು ಕಳೆದ ಒಂದೂವರೆ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ಬೆಂಗಳೂರಿನಲ್ಲಿ ರಾಜಸ್ಥಾನಿಗಳನ್ನು ಟಾರ್ಗೆಟ್ ಮಾಡಿಕೊಂಡು ಈ ದಂಧೆ ನಡೆಸುತ್ತಿದ್ದ. ಬಸ್ ಹಾಗೂ ರೈಲುಗಳ ಮೂಲಕ ಪಾರ್ಸೆಲ್ಗಳಲ್ಲಿ ಇದನ್ನು ಕಡಿಮೆ ಬೆಲೆಗೆ ನಗರಕ್ಕೆ ತರಿಸಿಕೊಂಡು ಮನೆಯಲ್ಲಿ ಮಿಕ್ಸರ್ ಅಥವಾ ಗ್ರೈಂಡರ್ ಮೂಲಕ ಪುಡಿ ಮಾಡಿ ರಾತ್ರಿ ಪೂರ್ತಿ ನೀರಿನಲ್ಲಿ ನೆನಸಿಟ್ಟ ಬಳಿಕ ಅದರ ನೀರನ್ನು ಪಾರ್ಟಿ ಹಾಗೂ ಮೋಜು ಮಸ್ತಿ ಕೂಟಗಳಲ್ಲಿ ಯುವ ಜನತೆಗೆ ಮಾರಾಟ ಮಾಡುತ್ತಿದ್ದ. ಇದಕ್ಕೆ ಈತ ಮೀಟರ್, ಕೆ.ಜಿ. ಎಂದು ಕೋಡ್ ವರ್ಡ್ ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಓರ್ವ ಆರೋಪಿ ಬಂಧಿಸಿದ್ದು, ಇದರ ಹಿಂದಿರುವ ಜಾಲವನ್ನು ಭೇದಿಸಲು ಮುಂದಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬೆಂಗಳೂರನ್ನು ಡ್ರಗ್ಸ್ ಮತ್ತು ರೌಡಿಸಂ ಮುಕ್ತ ನಗರವನ್ನಾಗಿಸುವುದೇ ನಮ್ಮ ಮೊದಲ ಆದ್ಯತೆ : ಡಿಜಿ ಐಜಿಪಿ ಅಲೋಕ್ ಮೋಹನ್