ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಐವರು ಬಂಧಿತ ವಿದೇಶಿಯರ ಪೈಕಿ ಓರ್ವ ಮಾದಕ ವಸ್ತು ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಜೆ.ಸಿ.ನಗರ ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆಫ್ರಿಕಾದ ಪ್ರಜೆಗಳು ಯಾರು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಯೂರಿನ್ ಟೆಸ್ಟ್ ವೇಳೆ ಗುಲೋರ್ಡ್ ಎಂಬಾತ ಮಾದಕ ವಸ್ತು ಸೇವಿಸಿರುವುದು ದೃಢವಾಗಿದೆ.
ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ಮೃತಪಟ್ಟಿದ್ದಾನೆ ಎನ್ನಲಾದ ಜಾನ್ ಎಂಬಾತನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಶವವನ್ನು ಯಾರಿಗೆ ಹಸ್ತಾಂತರ ಮಾಡುವುದರ ಬಗ್ಗೆ ರಾಯಬಾರಿ ಕಚೇರಿ ಅಧಿಕಾರಿಗಳ ಅಭಿಪ್ರಾಯ ಕೇಳಲಾಗುವುದು ಎಂದು ಮೀನಾ ಹೇಳಿದ್ದಾರೆ.
ಈಗಾಗಲೇ ಪ್ರಕರಣದಲ್ಲಿ ಉಳಿದವರನ್ನು ಬಂಧಿಸುವುದಕ್ಕೆ ವಿಶೇಷ ತಂಡ ರಚನೆ ಮಾಡಿ ಹುಡುಕಾಟ ನಡೆಸುತ್ತಿದ್ದೇವೆ. ಕಳೆದ ಆಗಸ್ಟ್‌ನಿಂದ ಉತ್ತರ ವಿಭಾಗದಲ್ಲಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ 154 ವಿದೇಶಿಗರ ಪತ್ತೆ ಮಾಡಿ ಬಂಧಿಸಲಾಗಿದೆ. ಜಾಮೀನು ಪಡೆದುಕೊಂಡ ಬಳಿಕ ಹಲವರ ಮೊಬೈಲ್ ನಂಬರ್ ಬದಲಾವಣೆ ಮಾಡಿದ್ದಾರೆ. ಹೀಗಾಗಿ ಇವರನ್ನು ಪತ್ತೆ ಹಚ್ಚುವುದೇ ತುಸು ಕಷ್ಟಕರವಾಗಲಿದೆ ಎಂದರು.
ಇದನ್ನೂ ಓದಿ: ಸ್ಟೂಡೆಂಟ್ ವೀಸಾದಡಿ ಬಂದು ಅಕ್ರಮ ಚಟುವಟಿಕೆ: ಪೊಲೀಸರಿಗೆ ತಲೆನೋವಾದ ಆಫ್ರಿಕನ್ ಪ್ರಜೆಗಳ ಅಟ್ಟಹಾಸ
ಮೃತ ಕಾಂಗೋ ಪ್ರಜೆ ಸಾವಿನ ಸಂಬಂಧ ಜೆ.ಸಿ.ನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಈಗಾಗಲೇ ಗಲಭೆಯ ಪೂರ್ತಿ ವಿಡಿಯೋಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಆರೋಪಿಗಳನ್ನು ಪೊಲೀಸ್ ಕಸ್ಟಡಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.