ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಸಿಸಿಬಿ ಪೊಲೀಸರ ತನಿಖೆ ಬೆನ್ನಲ್ಲೇ ಫೀಲ್ಡ್ಗೆ ಇಳಿದಿರುವ ಐಎಸ್ಡಿ ಪೊಲೀಸರು, ಕಿರುತೆರೆಯ ಸ್ಟಾರ್ಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಇಂದು 10 ಗಂಟೆಗೆ ಕಿರುತೆರೆ ನಟ ಅಭಿಶೇಕ್ ಹಾಗೂ ನಟಿ ಗೀತಾ ಭಾರತೀ ಭಟ್ ವಿಚಾರಣೆ ನಡೆಸಲಿದ್ದಾರೆ.
ಸಿಸಿಬಿ ಪೊಲೀಸರ ತನಿಖೆಯ ಬೆನ್ನಲ್ಲೇ ಅಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಅಧಿಕೃತವಾಗಿ ಫೀಲ್ಡ್ಗೆ ಇಳಿದಿದ್ದಾರೆ. ಈಗಾಗಲೇ ಮಾದಕ ನಂಟಿನ ಅನುಮಾನದ ಆಧಾರದ ಮೇಲೆ ಆಂತರಿಕಾ ಭದ್ರತಾ ವಿಭಾಗದ ಪೊಲೀಸರು ನಟ ಲೂಸ್ ಮಾದ ಯೋಗಿ, ಮಾಜಿ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ, ಸೀರಿಯಲ್ ಆ್ಯಕ್ಟರ್ ರಶ್ಮಿ ಚೆಂಗಪ್ಪ, ಖಾಸಗಿ ವಾಹಿನಿ ಸಿಬ್ಬಂದಿ ನಿಶ್ಚಿತಾ ಶರತ್ ಅವರ ವಿಚಾರಣೆ ನಡೆಸಿದ್ದು, 12 ಜನರಿಗೆ ನೋಟಿಸ್ ನೀಡಿದೆ.
ವಿಚಾರಣೆ ವೇಳೆ ಡ್ರಗ್ಸ್ ಡೀಲ್, ಡ್ರಗ್ಸ್ ಸಪ್ಲೈ ಸಂಬಂಧ ಒಂದಷ್ಟು ಮಹತ್ವದ ಮಾಹಿತಿಗಳನ್ನು ಕಲೆಹಾಕಿರುವ ಐಎಸ್ಡಿ ಪೊಲೀಸರು, ಮತ್ತಷ್ಟು ಸೆಲೆಬ್ರಿಟಿಗಳು, ರಾಜಕೀಯ ಮುಖಂಡರ ಮಕ್ಕಳಿಗೆ ನೋಟಿಸ್ ನೀಡೋಕೆ ಸಿದ್ಧತೆ ನಡೆಸಿದ್ದಾರೆ.
ಮಾದಕ ವಸ್ತು ಜಾಲ ಪತ್ತೆಗೆ ಮುಂದಾದ ಐಎಸ್ಡಿ: ಇಂದು 12 ಜನರ ವಿಚಾರಣೆ ಸಾಧ್ಯತೆ
ಸ್ಯಾಂಡಲ್‌ವುಡ್‌ನ ಡ್ರಗ್ಸ್ ಆರೋಪ ಪ್ರಕರಣ ಯಾವಾಗ ಬೆಳಕಿಗೆ ಬಂತೋ ನಗರದ ವಿವಿಧ ವಲಯದ ಎಲ್ಲಾ ಪೊಲೀಸರು ತಮ್ಮ ಕಾರ್ಯವನ್ನು ಚುರುಕುಗೊಳಿಸಿದ್ರು. ನಗರದ ಹಲವೆಡೆ ಡ್ರಗ್ಸ್ ಪೆಡ್ಲರ್ಸ್ ಐಎಸ್ಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ರು. ಬಂಧಿತರ ಬಳಿ ಗಾಂಜಾ, ಎಲ್ಎಸ್ಡಿ ಮಾತ್ರೆಗಳು ಸೇರಿದಂತೆ ವಿವಿಧ ರೀತಿಯ ಮಾದಕ ವಸ್ತುಗಳನ್ನು ಐಎಸ್ಡಿ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ರು.
ವಿಚಾರಣೆ ವೇಳೆ ಸಿನಿಮಾ ಮತ್ತು ಸೀರಿಯಲ್ಗಳ ನಟ, ನಟಿಯರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಆ ಹೆಸರುಗಳಲ್ಲಿ ರಾಜಕೀಯ ಮುಖಂಡರ ಮಕ್ಕಳು, ಅಧಿಕಾರಿಗಳ ಮಕ್ಕಳು, ಸಿನಿಮಾ ನಟ-ನಟಿಯರು ಇದ್ದಾರೆಂದು ಐಎಸ್ಡಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ನಾಲ್ವರು ಸ್ಟಾರ್ಗಳಿಗೆ ವಿಚಾರಣೆ ಬಿಸಿ ಮುಟ್ಟಿಸಿರುವ ಐಎಸ್ಡಿ ಪೊಲೀಸರು, ಇಂದು ಕಿರುತೆರೆ ನಟ ಅಭಿಶೇಕ್ ಹಾಗೂ ನಟಿ ಗೀತಾ ಭಾರತೀ ಭಟ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಐಎಸ್ಡಿ ಪೊಲೀಸರ ಮುಂದೆ ಹಾಜರಾಗಲು ಸೂಚಿಸಿದ್ದಾರೆ. ಸದ್ಯ ಐಎಸ್ಡಿ ಪೊಲೀಸರ ತನಿಖೆಯಲ್ಲಿ ಬಹುತೇಕ ಸೀರಿಯಲ್ ನಟ-ನಟಿಯರ ಹೆಸರೇ ಹೆಚ್ಚಾಗಿ ಕೇಳಿ ಬರ್ತಿದೆ.