ಬೆಂಗಳೂರು: ಡ್ರಗ್ಸ್ ಕೇಸ್‌ನಿಂದ ಕೇರಳ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಪಾರಾಗಿದ್ದಾನೆ. ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ಹಿಂದೆ ಇಡಿ ಕಸ್ಟಡಿಯಲ್ಲಿದ್ದಾಗಲೇ ಬಿನೀಶ್‌ನನ್ನು ಎನ್‌ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇತ್ತೀಚೆಗೆ ಡ್ರಗ್ಸ್ ಕೇಸ್‌ನಲ್ಲಿ ಎನ್‌ಸಿಬಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದರಲ್ಲಿ 2ನೇ ಪ್ರಮುಖ ಆರೋಪಿಯಾಗಿರುವ ಅನೂಪ್ ಜತೆಗೆ ಬಿನೀಶ್ ಕೋಟ್ಯಂತರ ರೂ. ಹಣಕಾಸು ವ್ಯವಹಾರ ನಡೆಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಎನ್‌ಸಿಬಿ ಅಧಿಕಾರಿಗಳು ಬಿನೀಶ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.
ಡ್ರಗ್ಸ್ ಪ್ರಕರಣದಲ್ಲಿ ಬಿನೀಶ್ ಪರ ಸೂಕ್ತ ಸಾಕ್ಷ್ಯಾಧಾರಗಳು ದೊರೆಯದೆ ಹಿನ್ನೆಲೆ ಚಾರ್ಜ್‌ಶೀಟ್‌ನಿಂದ ಎನ್‌ಸಿಬಿ ಅಧಿಕಾರಿಗಳು ಆತನ ಹೆಸರನ್ನು ಕೈಬಿಟ್ಟಿದ್ದಾರೆ. ಆದರೆ, ಇಡಿ ಅಧಿಕಾರಿಗಳಿಗೆ ಈತ ಆರೋಪಿ ಅನೂಪ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷ್ಯ ಸಿಕ್ಕಿದ್ದು, ಅಂತಿಮ ಹಂತದ ಚಾರ್ಜ್‌ಶೀಟ್ ಸಲ್ಲಿಸಲು ಮುಂದಾಗಿದ್ದಾರೆ. ಎನ್‌ಸಿಬಿಯಿಂದ ಪಾರಾದರೂ ಬಿನೀಶ್‌ಗೆ ಇಡಿ ಸಂಕಷ್ಟ ಮುಂದುವರೆದಿದೆ.
ಕಳೆದ ಆ.21 ರಂದು ಬೆಂಗಳೂರಿನ ಕೊತ್ತನೂರಿನ ಬಳಿ ಡ್ರಗ್ಸ್ ಕೇಸ್‌ನಲ್ಲಿ ಅನಿಕಾಳನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಅನಿಕಾ ವಿಚಾರಣೆ ಬೆನ್ನಲ್ಲೇ ಕೇರಳದ ಮೊಹಮ್ಮದ್ ಅನೂಪ್ ಹಾಗೂ ರವೀಂದ್ರನ್ ಸಿಕ್ಕಿ ಬಿದ್ದಿದ್ದರು. ಅನಿಕಾ ಬಳಿ ಸಿಕ್ಕಿದ ಡೈರಿಯಲ್ಲಿ ತನ್ನೊಂದಿಗೆ ಸಂಪರ್ಕದಲ್ಲಿದ್ದು, ಡ್ರಗ್ಸ್ ಖರೀದಿಸುತ್ತಿದ್ದ ಕೆಲವರ ಮಾಹಿತಿಯನ್ನು ಉಲ್ಲೇಖಿಸಿದ್ದಳು. ಫೆ.18 ರಂದು ಎನ್‌ಡಿಪಿಎಸ್ ಕೋರ್ಟ್‌ಗೆ ಎನ್‌ಸಿಬಿಯಿಂದ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.