ಬೆಂಗಳೂರು: ರಾಜ್ಯದಲ್ಲಿ ಜಮೀನುಗಳ ಸರ್ವೇಯನ್ನ ಡ್ರೋನ್ ಮೂಲಕ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಅಶೋಕ್ ಪ್ರಕಟಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 100 ವರ್ಷಗಳಿಂದ ಆಸ್ತಿ ಸರ್ವೇ ಆಗಿಲ್ಲ. ಹೀಗಾಗಿ ಡಿಜಿಟಲ್ ಮಾಹಿತಿ ಸಂಗ್ರಹಕ್ಕೆ ಡ್ರೋನ್ ಸರ್ವೇ ಮಾಡಿಸಲಾಗುತ್ತದೆ. ಈಗಾಗಲೇ ರಾಮನಗರ, ತುಮಕೂರು, ಹಾಸನ, ಬೆಳಗಾವಿ, ಉತ್ತರ ಕನ್ನಡ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಡ್ರೋಣ್ ಸರ್ವೇ ಆಗಿದೆ. ಭಾರತೀಯ ಸರ್ವೇಕ್ಷಣಾ ಸಂಸ್ಥೆಗಳ ಮೂಲಕ ಡ್ರೋನ್ ಸರ್ವೇ ಮಾಡಿಸಲಾಗುತ್ತದೆ. ರಾಜ್ಯದ ಉಳಿದ 26 ಜಿಲ್ಲೆಗಳಲ್ಲಿ 1.40 ಲಕ್ಷ ಚದರ್ ಕಿಲೋ ಮೀಟರ್ ಡ್ರೋನ್ ಸರ್ವೇ ಮಾಡಲಾಗುತ್ತದೆ. ಇದಕ್ಕಾಗಿ ₹287 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆಯಲ್ಲಿ ಇದೆ ಎಂದರು.
ಹುತಾತ್ಮ ಯೋಧ ಇಬ್ರಾಹಿಂ ಕುಟಂಬಕ್ಕೆ ಉಚಿತ ಮನೆ: ಹಿಮಪಾತದಲ್ಲಿ ಮೃತರಾದ ಕೊಡಗು ವೀರ ಯೋಧ ಇಬ್ರಾಹಿಂ ಕುಟುಂಬಕ್ಕೆ ಸರ್ಕಾರದ ವತಿಯಿಂದ ಉಚಿತವಾಗಿ ನಿವಾಸ ಕೊಡುವುದಾಗಿ ವಸತಿ ಸಚಿವ ವಿ.ಸೋಮಣ್ಣ ಘೋಷಣೆ ಮಾಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಹಿಮಪಾತದಲ್ಲಿ ಮೃತಪಟ್ಟ ಕೊಡಗು ವೀರ ಯೋಧ ಇಬ್ರಾಹಿಂ ಕುಟುಂಬಕ್ಕೆ ನಿವಾಸ ಕೊಡಿ. ಅವರ ಕುಟುಂಬಕ್ಕೆ ನಿವೇಶನ ಇಲ್ಲ. ಕೂಡಲೇ ಈ ಕುಟುಂಬಕ್ಕೆ ವಸತಿ ಕೊಡಿ. ಗ್ರಾಮ ಪಂಚಾಯತಿ ಸದಸ್ಯರಿಗೆ 20 ಮನೆ ಕೊಡುತ್ತುದ್ದೀರಾ, ಇದನ್ನ ಹೆಚ್ಚಳ ಮಾಡಿ ಎಂದು ಜೆಡಿಎಸ್ ಶ್ರೀಕಂಠೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಗ್ರಾಮೀಣ ಭಾಗದ ವಿವಿಧ ವಸತಿ ಯೋಜನೆಗೆ ಸರ್ಕಾರದಿಂದ 1.20 ಲಕ್ಷ ಅನುದಾನ ನೀಡಲಾಗುತ್ತಿದೆ.
ಈಗ ಕೊಡುತ್ತಿರುವ ಅನುದಾನ ಕಡಿಮೆ ಇದೆ. ಇದನ್ನ ಹೆಚ್ಚಳ ಮಾಡಲು ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಮೃತ ಯೋಧ ಇಬ್ರಾಹಿಂ ಕುಟುಂಬಕ್ಕೆ ಕೊಡಗಿನಲ್ಲಿ ಮನೆ ಕೊಡುತ್ತೇವೆ ಎಂದು ಸದನದಲ್ಲೇ ಸಚಿವ ಸೋಮಣ್ಣ ಘೋಷಿಸಿದರು.
ಕೋಳಿ ಸಾಕಾಣಿಕೆ ಕೃಷಿಗೆ : ಕೋಳಿ ಸಾಕಾಣಿಕೆಯನ್ನ ಕೃಷಿಗೆ ಸೇರಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರೋ "ಉದ್ಯಮಿಮಿತ್ರ" ಯೋಜನೆ ಜಾರಿಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಈ ಯೋಜನೆ ಅಡಿ ಉದ್ಯಮಶೀಲತೆ ಸ್ಥಾಪನೆಗೆ ಯೋಜನೆ ವೆಚ್ಚಕ್ಕಾಗಿ 50% ಬಂಡವಾಳ ಸಹಾಯಧನ ಪಡೆಯಬಹುದು. ಶೀಘ್ರವಾಗಿ ಯೋಜನೆ ರಾಜ್ಯದಲ್ಲಿ ಜಾರಿಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಕೋಳಿ ಸಾಕಾಣಿಕೆಗೆ ವಿಶೇಷ ಬಡ್ಡಿ ದರದಲ್ಲಿ ಸಾಲ ನೀಡುವ ಯಾವುದೇ ಯೋಜನೆ ಇಲ್ಲ. ಕೋಳಿ ಸಾಕಾಣಿಕೆ ಮಾಡುವರು ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳು, ಷೆಡ್ಯೂಲ್, ನಬಾರ್ಡ್ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು. ಕೋಳಿ ಸಾಕಾಣಿಕೆಯನ್ನ ಕೃಷಿಗೆ ಸೇರಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪಶು ಆ್ಯಂಬುಲೆನ್ಸ್ ಯೋಜನೆ ಜಾರಿ: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪಶು ಆ್ಯಂಬುಲೆನ್ಸ್ ಯೋಜನೆ ಜಾರಿಗೆ ತರುತ್ತಿದ್ದು, ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಯೋಜನೆಯನ್ನು ಸಧ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗೋ ಸಂರಕ್ಷಣೆಗೆ 275 ಸಂಚಾರಿ ಪಶು ಚಿಕಿತ್ಸಾ ವಾಹನ ಖರೀದಿಸುತ್ತೇವೆ. 15 ಆ್ಯಂಬುಲೆನ್ಸ್ ಈಗಾಗಲೇ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.
ಪ್ರತಿ ಒಂದು ಲಕ್ಷ ಜಾನುವಾರುಗಳಿಗೆ ಒಟ್ಟು 275 ಆ್ಯಂಬುಲೆನ್ಸ್ಗಳು ಮಂಜೂರಾಗಿವೆ. ಪ್ರತಿ ಆ್ಯಂಬುಲೆನ್ಸ್ ನಲ್ಲಿ ಪಶು ಚಿಕಿತ್ಸಕರು ಇರುತ್ತಾರೆ. ಇದು ದೇಶದಲ್ಲಿ ಯಾರೂ ಮಾಡಿಲ್ಲ, ನಾವೇ ಮೊದಲು ಮಾಡುತ್ತಿದ್ದೇವೆ. ಶೀಘ್ರವಾಗಿ ಮುಖ್ಯಮಂತ್ರಿಗಳಿಂದ ಆ್ಯಂಬುಲೆನ್ಸ್ ಲೋಕಾರ್ಪಣೆ ಮಾಡಿಸುತ್ತೇವೆ ಎಂದರು.
ಈ ವೇಳೆ ಆ್ಯಂಬುಲೆನ್ಸ್ ಮೇಲೆ ನಿಮ್ಮದೊಂದು ಫೋಟೋ ಹಾಕಿಸಿಕೊಳ್ಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹಾಸ್ಯ ಮಾಡಿದರು. ಇದಕ್ಕೆ ಹಾಕಿಸುತ್ತೇನೆ ಎಂದು ಸಚಿವ ಚೌವ್ಹಾಣ್ ಹಾಸ್ಯವಾಗಿಯೇ ಸ್ಪಷ್ಟಪಡಿಸಿದರು.
ಶೀಘ್ರವೇ ತುಮಕೂರು, ರಾಯದುರ್ಗ ರೈಲ್ವೆ ಯೋಜನೆ ಪೂರ್ಣ: ತುಮಕೂರು ರಾಯದುರ್ಗ ರೈಲ್ವೆ ಯೋಜನೆಗೆ ಸುಮಾರು 400 ಎಕರೆ ಭೂಮಿ ಸ್ವಾಧೀನ ಆಗಬೇಕು. ಆದಷ್ಟು ಬೇಗ ಭೂಸ್ವಾಧೀನ ಮಾಡಿಕೊಂಡು ಕೆಲಸ ಪ್ರಾರಂಭ ಮಾಡಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ತುಮಕೂರು ರಾಯದುರ್ಗ ರೈಲ್ವೆ ಯೋಜನೆ ಮಂದಗತಿಯಲ್ಲಿ ನಡೆಯುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆ ಕೂಡ ಅತ್ಯಂತ ವಿಳಂಬವಾಗುತ್ತಿದೆ. ಮಧುಗಿರಿ, ಕೊರಟಗೆರೆ, ಪಾವಗಡ ಭಾಗದಲ್ಲಿ ಭೂಸ್ವಾಧಿನ ತಡವಾಗುತ್ತಿದೆ. ಶೀಘ್ರದಲ್ಲಿಯೇ ಕಾಮಗಾರಿ ಮುಗಿಸುವಂತೆ ಸದಸ್ಯ ರಾಜೇಂದ್ರ ರಾಜಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಕೆಲವು ಕಡೆ ರೈಲು ಸಂಚಾರ ಪ್ರಾರಂಭ ಆಗಿದೆ. 2025-26 ರ ವೇಳೆಗೆ ಇಡೀ ಕಾಮಗಾರಿ ಪೂರ್ಣಗೊಳ್ಳಲಿದೆ.
ಕೆಲವು ಕಡೆ ಜಮೀನು ಬಿಟ್ಟುಕೊಡಲು ತಕಾರರಿತ್ತು. ಅದನ್ನು ಶೀಘ್ರ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಯೋಜನೆಗೆ 992 ಎಕರೆ ಪೈಕಿ 52,568 ಚದರ ಅಡಿ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಇನ್ನೂ ಸುಮಾರು 400 ಎಕರೆ ಭೂಮಿ ಸ್ವಾಧೀನ ಆಗಬೇಕು. ಆದಷ್ಟು ಬೇಗ ಭೂಸ್ವಾಧೀನ ಮಾಡಿಕೊಂಡು ಕೆಲಸ ಪ್ರಾರಂಭಿಸುತ್ತೇವೆ ಎಂದು ಮಾಹಿತಿ ನೀಡಿದರು.
ಶಾಸಕರ ಪತ್ನಿಯರಿಗೂ ಟೋಲ್ ಪಾಸ್ ಬೇಕಂತೆ..? ಸಂಸದರ ಪತ್ನಿಯರಿಗೆ ಟೋಲ್ ಗಳಲ್ಲಿ ಶುಲ್ಕ ಪಾವತಿಗೆ ವಿನಾಯಿತಿ, ಉಚಿತ ಪಾಸ್ ನೀಡುವ ವ್ಯವಸ್ಥೆ ಇದ್ದು, ಇದೇ ಮಾದರಿಯಲ್ಲಿ ಶಾಸಕರ ಪತ್ನಿಯರಿಗೂ ಟೋಲ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಪಾಸ್ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಬೇಡಿಕೆ ಇರಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಟೋಲ್ ಪ್ಲಾಜಾಗಳಲ್ಲಿ ಹಣ ವಸೂಲಿ ನಡೆಯುತ್ತಲೇ ಇದೆ. ಅವಧಿ ಮುಗಿದು ಹೋಗಿದ್ದರೂ ಹಣ ವಸೂಲಿ ಟೋಲ್ ಗಳಲ್ಲಿ ನಡೆಯುತ್ತಿದೆ. ಲೆಕ್ಕವಿಲ್ಲದಷ್ಟು ಹಣ ವಸೂಲಿ ಮಾಡಲಾಗುತ್ತಿದೆ. ಪಾರ್ಲಿಮೆಂಟ್ ನಲ್ಲಿ ನಮ್ಮ ಹೆಂಡತಿಯರಿಗೂ ಪಾಸ್ ಕೊಡುತ್ತಾರೆ. ಇಲ್ಲಿಯೂ ಕೂಡ ಅಂಥದ್ದೇ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.
ಒಬ್ಬಳೇ ಹೆಂಡತಿಗೆ ಕೊಡಿ ಎಂದು ಸಿಎಂ ಇಬ್ರಾಹಿಂ ಬೇಡಿಕೆ ಇರಿಸಿದರು. ಈ ವೇಳೆ ಇಬ್ರಾಹಿಂ ತಮ್ಮ ಕಷ್ಟ ಹೇಳಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಗೋವಿಂದರಾಜು ಹಾಸ್ಯ ಚಟಾಕಿ ಹಾರಿಸಿದರು. ಸಿಎಂ ಇಬ್ರಾಹಿಂ ಧರ್ಮ ಪತ್ನಿ ಅಂತಿಲ್ಲ, ಧರ್ಮ ಪತ್ನಿಯರು ಅಂತಿದ್ದಾರೆ ಎಂದು ಸಚಿವ ಸಿ ಸಿ ಪಾಟೀಲ್ ಇಬ್ರಾಹಿಂ ಕಾಲೆಳೆದರು.
ನಂತರ ಟೋಲ್ ಸಂಗ್ರಹ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿ.ಸಿ ಪಾಟೀಲ್, ರಾಜ್ಯದಲ್ಲಿ 44 ಟೋಲ್ ಪ್ಲಾಜಾಗಳು ಇವೆ. 41 ಪ್ಲಾಜಾಗಳಲ್ಲಿ ಬಿಟಿಒ ಮತ್ತು ಡಿಬಿಎಫ್ಒಟಿ ಟೆಂಡರ್ ಆಧಾರದಲ್ಲಿ ಪಡೆದಿರುವ ಗುತ್ತಿಗೆ ಆಧಾರದಲ್ಲಿ ಟೋಲ್ ಪಡೆಯುತ್ತಾರೆ. ಕೆಲ ಟೋಲ್ ವಿಚಾರ ಕೋರ್ಟ್ ನಲ್ಲಿದೆ. ಕೋರ್ಟ್ ನಲ್ಲಿ ಕೇಸ್ ಮುಗಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಡಿಸೆಂಬರ್ ಅಂತ್ಯಕ್ಕೆ ಎನ್‌ಹೆಚ್ 209 ಕಾಮಗಾರಿ ಪೂರ್ಣ: ತಮಿಳುನಾಡು ಟು ಬೆಂಗಳೂರು ನ್ಯಾಷನಲ್ ಹೈವೇ 209 ರಸ್ತೆ ಕಾಮಗಾರಿ ಯೋಜನೆ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ನ್ಯಾಷನಲ್ ಹೈವೇ 209 ತಮಿಳುನಾಡು ಟು ಬೆಂಗಳೂರು ರಸ್ತೆ ಕಾಮಗಾರಿ ಯೋಜನೆ ನಿಗದಿಗಿಂತ 937 ದಿನ ತಡವಾಗಿದೆ. ಟೆಂಡರ್ ಪಡೆದ ಕಂಪನಿ ಮಾಲೀಕನೇ ಸತ್ತು ಹೋಗಿದ್ದಾರೆ.
ಈ ರಸ್ತೆ ಆಗದೇ ಕನಕಪುರ, ರಾಮನಗರ, ಭಾಗದಲ್ಲಿ ಜನ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಕಂಪನಿ ಎಂಡಿ ಸತ್ತು ಹೋಗಿದ್ದರೆ ಬೇರೆಯವರಿಗೆ ಕೆಲಸ ಕೊಟ್ಟು ಮುಗಿಸುತ್ತೇವೆ. ಡಿಸೆಂಬರ್ ಅಂತ್ಯದ ವೇಳೆಗೆ ಯೋಜನೆ ಮುಗಿಸುತ್ತೇವೆ ಎಂದು ಭರವಸೆ ನೀಡಿದರು.