ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ವಾಹನ ಸವಾರರಿಗೆ ದಂಡ ಹೆಚ್ಚು ಹೊರೆಯಾಗಬಾರದೆಂದು ರಾಜ್ಯ ಸರ್ಕಾರ ದಂಡದ ಪ್ರಮಾಣವನ್ನ ಇಳಿಸಿ ಈ ಸಂದೇಶವನ್ನ ಎಲ್ಲಾ ಠಾಣೆಗಳಿಗೂ ರವಾನಿಸಿತ್ತು. ಆದ್ರೆ ಸಿಲಿಕಾನ್ ಸಿಟಿ ವಾಹನ ಸವಾರರು ಮಾತ್ರ ದಂಡ ಏರಿದಾಗಲೂ, ಇಳಿದಾಗಲೂ ರಸ್ತೆ ನಿಯಮ ಉಲ್ಲಂಘನೆಯಂತಹ ತಪ್ಪನ್ನು ಮುಂದುವರಿಸಿದ್ದಾರೆ.
ಹೌದು, ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ 2019ರ ಅಡಿಯಲ್ಲಿ ದಂಡದ ಪ್ರಮಾಣವನ್ನು ಏರಿಸಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಬುದ್ಧಿ ಕಲಿಸಲಾಗಿತ್ತು. ಸದ್ಯ ದಂಡದ ಪ್ರಮಾಣವನ್ನು ಇಳಿಸುತ್ತಿದ್ದಂತೆ ವಾಹನ ಸವಾರರು ಮತ್ತೆ ಅದೇ ಚಾಳಿ ಮುಂದುವರೆಸಿದ್ದಾರೆ. ನಿನ್ನೆ ವೀಕೆಂಡ್ ಮಸ್ತಿಯಲ್ಲಿದ್ದ ವಾಹನ ಸವಾರರು ಹಲವಾರು ನಿಯಮಗಳನ್ನು ಉಲ್ಲಂಘಿಸಿ ಮತ್ತೆ ಟ್ರಾಫಿಕ್ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೇವಲ ಒಂದೇ ದಿನಕ್ಕೆ ಬರೋಬ್ಬರಿ 2,688 ಪ್ರಕರಣಗಳು ದಾಖಲಾಗಿದ್ದು, ಏಳು ಲಕ್ಷದ 57 ಸಾವಿರ ರೂಪಾಯಿ ದಂಡ ಪೊಲೀಸರ ಕೈ ತಲುಪಿದೆ.
ವಿವಿಧ ಪ್ರಕರಣಗಳು:
ಹೆಲ್ಮೆಟ್ ಧರಿಸದ ಸಂಬಂಧ 553 ಪ್ರಕರಣಗಳು, ಸಿಗ್ನಲ್ ಜಂಪಿಂಗ್ ಸಂಬಂಧ 398 ಕೇಸ್ಗಳು, ಡ್ರಂಕ್ ಆಂಡ್ ಡ್ರೈವ್ ಸಂಬಂಧ 19 ಕೇಸ್ಗಳು, ಶಾಲಾ ವಾಹನದಲ್ಲಿ ಅಧಿಕ ಮಕ್ಕಳ ಪ್ರಯಾಣ, ಜಿಗ್ ಜಾಗ್ ಡ್ರೈವಿಂಗ್, ವಾಹನದ ಮೇಲೆ ಕುಳಿತು ಪ್ಯಾಸೆಂಜರ್ ಪ್ರಯಾಣ, ನಿಷೇಧಿತ ಸ್ಥಳಗಳಲ್ಲಿ ಕರ್ಕಶ ಹಾರ್ನ್ ಬಳಕೆ, ಜೀಬ್ರಾ ಕ್ರಾಸ್ ಮೇಲೆ ನಿಲುಗಡೆ, ಅಪಾಯಕಾರಿ ಆಟೋ ಚಾಲನೆ, ಹೆಚ್ಚುವರಿ ಹೈಬೀಮ್ ಲೈಟ್ ಬಳಕೆ, ಹೆಚ್ಚುವರಿ ಪ್ರಯಾಣಿಕರು ಹೊತ್ತೊಯ್ಯುತ್ತಿರುವ ವಾಹನ, ನಿಷೇಧಿತ ರಸ್ತೆಗಳಲ್ಲಿ ವಾಹನ ಚಾಲನೆ, ಹಳದಿ ಗೆರೆ ಮೇಲೆ ವಾಹನ ನಿಲುಗಡೆ, ನಿಲುಗಡೆಯಾಗಿರುವ ವಾಹನದ ಮುಂದೆ ಮತ್ತೊಂದು ವಾಹನ ನಿಲುಗಡೆ, ಆಟೋ ಕ್ಯಾಬ್ ಅಧಿಕ ದರ ಸವಾರರಿಂದ ವಸೂಲಿ, ಜನ ದಾಟುವ ಜಾಗದಲ್ಲಿ ವಾಹನ ನಿಲುಗಡೆ, ವಿಭಜಕ ದಾಟಿ ರಸ್ತೆಯ ಮತ್ತೊಂದು ಭಾಗದಲ್ಲಿ ಚಾಲನೆ, ಡಬಲ್ ಪಾರ್ಕಿಂಗ್ ಹೀಗೆ ಹಲವಾರು ನಿಯಮಗಳನ್ನ ವಾಹನ ಸವಾರರು ಉಲ್ಲಂಘಿಸುವ ಮೂಲಕ ದಂಡ ತೆತ್ತಿದ್ದಾರೆ.