ಬೆಂಗಳೂರು : ನಮ್ಮಲ್ಲಿ ಕೃಷಿ ಬೆಳೆದಿದೆ. ಆದರೆ, ಕೃಷಿಯನ್ನು ಬೆಳೆಸಿದ ರೈತ ಸಂಕಷ್ಟದಲ್ಲಿದ್ದಾನೆ. ಹೀಗಾಗಿ, ಸರ್ಕಾರಗಳು ರೈತನನ್ನು ಅಭಿವೃದ್ಧಿ ಪಡಿಸುವ ಅಗತ್ಯತೆ ಇದೆ ಎಂದು ಸಿಎಂ ಬಸವರಾಜ ಎಸ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ರೈತ ವಿದ್ಯಾನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಕೃಷಿ ಬೆಳೆದಿದೆ. ಆದರೆ, ಕೃಷಿಯನ್ನು ಬೆಳೆಸಿದ ರೈತ ಸಂಕಷ್ಟದಲ್ಲಿದ್ದಾನೆ. ಕೃಷಿ ಅಭಿವೃದ್ಧಿ ಜೊತೆಗೆ ಸರ್ಕಾರಗಳು ರೈತರ ಅಭಿವೃದ್ಧಿ ಪಡಿಸುವ ಚಿಂತನೆ ಮಾಡುವ ಅವಶ್ಯಕತೆ ಇದೆ. ಯಾಕೆಂದರೆ, ರೈತ ಉಳಿದರೆ ಕೃಷಿ ಉಳಿಯುತ್ತದೆ. ಹಾಗಾಗಿ, ರೈತನ ಶ್ರಮಕ್ಕೆ, ಆತನ ಬೆವರಿಗೆ ಸರಿಯಾದ ಬೆಲೆ ಕೊಡುವ ಕಾಲ ಬಂದಿದೆ ಎಂದು ತಿಳಿಸಿದರು.
ಮೋದಿ ಓರ್ವ ಮುತ್ಸದ್ಧಿ ರಾಜಕಾರಣಿ : ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳುವುದು ಧೈರ್ಯದ ಮಾತು. ಅಂಥ ಧೈರ್ಯವನ್ನು ಮೋದಿಯವರು ತೋರಿದ್ದಾರೆ. ಮೋದಿಯವರಂಥ ಮುತ್ಸದ್ಧಿ ರಾಜಕಾರಣಿ ನಮಗೆ ಸಿಕ್ಕಿದ್ದಾರೆ. ಯೋಜನೆಗಳು ಮೊದಲು ಮನಸ್ಸಿನಲ್ಲಿ ತಯಾರಾಗುತ್ತವೆ. ಬಳಿಕ ಕಾರ್ಯರೂಪಕ್ಕೆ ಬರುತ್ತವೆ. ರೈತರ ಆದಾಯ ಎರಡು ಪಟ್ಟು ಆಗಬೇಕು ಅನ್ನೋದು ಪ್ರಧಾನಿಯವರ ವಿನೂತನ ಯೋಚನೆ. ಈ ಯೋಚನೆಗೆ ಬಹಳಷ್ಟು ಧೈರ್ಯ ಬೇಕು ಎಂದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇದು ಅಷ್ಟು ಸುಲಭವಾಗಿ ಸಾಧ್ಯವಾಗಿಲ್ಲ. ರಾಜಕಾರಣಿಗಳು ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟಿರ್ತಾರೆ. ಒಬ್ಬ ಮುತ್ಸದ್ಧಿ ಮುಂದಿನ ಜನಾಂಗದ ಮೇಲೆ ಕಣ್ಣು ನೆಟ್ಟಿರ್ತಾನೆ. ಅಂಥ ಮುತ್ಸದ್ಧಿ ರಾಜಕಾರಣಿ ಮೋದಿಯವರು ಎಂದರು.
ಓದಿ: ಕೇಂದ್ರ ತಂಡದ ಕಾಟಾಚಾರದ ನೆರೆ ಅಧ್ಯಯನ : ಅಧಿಕಾರಿಗಳ ವಿರುದ್ಧ ಸಂತ್ರಸ್ತ ಆಕ್ರೋಶ
ಒಬ್ಬ ಜನಪ್ರತಿನಿಧಿಗೆ ತನ್ನ ವಿಚಾರವನ್ನು ಯೋಜನೆ ರೂಪದಲ್ಲಿ ತಂದು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸಿಗುವ ಸಂತೋಷ ಬೇರೆ ಯಾವುದರಲ್ಲೂ ಇಲ್ಲ. ಕೃಷಿ ವಿಶ್ವವಿದ್ಯಾಲಯ ತಮ್ಮ ಕ್ಯಾಂಪಸ್‌ನಲ್ಲಿ ಬೆಳೆದು ತೋರಿಸಿದ್ರೆ ಪ್ರಯೋಜನ ಇಲ್ಲ. ರೈತರ ಹೊಲಗಳಲ್ಲಿ ಯಶಸ್ವಿಯಾಗಿ ಬೆಳೆದು ತೋರಿಸುವ ಕೆಲಸ ಕೃಷಿ ವಿಶ್ವವಿದ್ಯಾಲಯಗಳು ಮಾಡಬೇಕು. ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್‌ನಿಂದ ಹೊರ ಬರಬೇಕು ಎಂದು ಕರೆ ನೀಡಿದರು.
ರೈತರ ಮದುವೆ, ಖಾಯಿಲೆಯಿಂದಾಗಿ ಸಾಲದ ಕೂಪಕ್ಕೆ ಹೋಗ್ತಾರೆ. ಇಂಥ ಸಮಸ್ಯೆ ನೀಗಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಅವರು ಆರ್ಥಿಕವಾಗಿಯೂ ಸದೃಢರಾಗಬೇಕು, ಆರೋಗ್ಯವಂತರಾಗಿರಬೇಕು. ರೈತನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಮೂಲಕ ಸರ್ಕಾರ ರೈತನ ಸಹಾಯಕ್ಕಾಗಿ ಧಾವಿಸಿದೆ ಎಂದು ತಿಳಿಸಿದರು.
ಕರ್ನಾಟಕ ಇತರೆ ರಾಜ್ಯಗಳಿಗೆ ಮಾದರಿ : ಕರ್ನಾಟಕ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ರೈತರ ಮಕ್ಕಳಿಗೆ ಶಿಷ್ಯ ವೇತನ ಯೋಜನೆ ದೇಶದಲ್ಲಿ ಮೊದಲ ಪ್ರಯತ್ನ. ಇಂತಹ ಯೋಜನೆಯಿಂದ ರೈತರ ಮಕ್ಕಳಿಗೆ ಉಪಯೋಗ ಆಗುತ್ತದೆ. ಕರ್ನಾಟಕದ ಕೃಷಿ ಮಾದರಿ ಪ್ರಗತಿಯನ್ನು ಇತರೆ ರಾಜ್ಯಗಳು ಸಹ ಅಳವಡಿಸಬೇಕೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕರೆ ನೀಡಿದರು.
ಓದಿ: ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ?
ಇಡೀ ದೇಶದಲ್ಲಿ ಕೃಷಿ ಕ್ಷೇತ್ರ ಪ್ರಗತಿ ಸಾಧಿಸಿದೆ. ಅನೇಕ ವಿಷಯಗಳಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದಿದೆ. ರೈತ ಮಕ್ಕಳ ವಿಧ್ಯಾರ್ಥಿ ವೇತನ ದೇಶದಲ್ಲಿ ಮೊದಲ ಯೋಜನೆ. ಈ ಯೋಜನೆಯಿಂದ ಕರ್ನಾಟಕದ ಕಡೆ ಇಡೀ ದೇಶವೇ ತಿರುಗಿ ನೋಡಲಿದೆ ಎಂದು ಹೇಳಿದರು.
ಮೋದಿ ಸಬ್ ಕಾ ಸಾಥ್ ಸಭ್ ಕಾ ವಿಕಾಸ್ ಅಂದಿದ್ರು. ಅದರ ಜೊತೆಗೆ ರೈತರ ಕಲ್ಯಾಣ ಆಗುತ್ತಿದೆ. ರೈತರ ಆದಾಯ ದ್ವಿಗುಣವಾಗಬೇಕು. ಮೋದಿ ಈ ಕನಸು ಇಟ್ಟುಕೊಂಡಿದ್ದಾರೆ. ಆ ದಿಕ್ಕಿನಲ್ಲಿ ಕರ್ನಾಟಕ ಸಾಗುತ್ತಿದೆ. ರೈತರ ಆದಾಯ ದ್ವಿಗುಣ ಮಾಡುವ ಗುರಿ ಕೇಂದ್ರ ಸರ್ಕಾರದ್ದಾಗಿದೆ. 2022ಕ್ಕೆ ಈ ಗುರಿಯನ್ನು ನಾವು ತಲುಪಬೇಕಿದೆ ಎಂದರು.
ಮೊದಲ ಕೃಷಿ ಬಜೆಟ್ ಮಂಡಿಸಿದ್ದು ಯಡಿಯೂರಪ್ಪ : ದೇಶದಲ್ಲಿ ಮೊದಲ ಕೃಷಿ ಬಜೆಟ್ ಮಂಡಿಸಿದ್ದು ಯಡಿಯೂರಪ್ಪ ಎಂದು ಸ್ಮರಿಸಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ದೇಶದಲ್ಲಿ ಯೋಜನೆ ತಂದರೆ ಅದು ಮೊದಲನೆಯದಾಗಿ ಕರ್ನಾಟಕ ಅನ್ನೋದು ಸತ್ಯ ಎಂದರು.
ಪಂಚಾಯತ್ ರಾಜ್ ವ್ಯವಸ್ಥೆಯ ಬದಲಾವಣೆ ರಾಜ್ಯದಿಂದ ಆಗಿದೆ. ಮೊದಲ ಕೃಷಿ ಬಜೆಟ್ ಮಂಡಿಸಿದ್ದು ಯಡಿಯೂರಪ್ಪನವರು. ಬಸವರಾಜ ಬೊಮ್ಮಾಯಿ ಒಂದು ಹೆಜ್ಜೆ ಮುಂದೆ ಹೋಗಿ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಪಿಯುಸಿಯಿಂದ ಪಿಜಿವರೆಗೂ ನಿರಂತರವಾಗಿ ವಿದ್ಯಾರ್ಥಿ ವೇತನ ನೀಡ್ತಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಓದಿ: ಜಮೀನಿಗಾಗಿ ಜಗಳ: ಸಮಸ್ಯೆ ಬಗಹರಿಸಲು ಮಧ್ಯಪ್ರವೇಶಿಸಿದ ದಾವಣಗೆರೆ ತಹಶೀಲ್ದಾರ್