ಬೆಂಗಳೂರು: ಜನಸ್ನೇಹಿ ಪೊಲೀಸಿಂಗ್ಗೆ ಮುಂದಾಗಿರುವ ನಗರ ಪೊಲೀಸರು ಈ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಠಾಣೆಗಳಲ್ಲಿ ಮಾಸಿಕ ಜನಸಂಪರ್ಕ ದಿನವನ್ನಾಗಿ ಆಚರಿಸಲಾಗುತ್ತಿದ್ದು ಇದಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಿದ್ಯುಕ್ತ ಚಾಲನೆ ನೀಡಿದ್ದಾರೆ.
ಪ್ರತಿ ತಿಂಗಳ ನಾಲ್ಕನೇ ಶನಿವಾರ ಹಮ್ಮಿಕೊಳ್ಳಲಾಗುವ ಮಾಸಿಕ ಸಂಪರ್ಕ ಅಭಿಯಾನವನ್ನು ಮೊದಲು ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾಯಿತು. ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಬಾಕಿಯಿರುವ ಪ್ರಕರಣಗಳ ಮಾಹಿತಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳ ಕುರಿತಂತೆ ನಾಗರಿಕರು ಬೆಳಕು ಚೆಲ್ಲಿದರು.
ಇದಕ್ಕೂ ಮುನ್ನ ನಿವೃತ್ತ ಡಿಜಿ ಅಜಯ್ ಕುಮಾರ್ ಸಿಂಗ್ ಮಾತನಾಡಿ, ಪೊಲೀಸ್ ಕೆಲಸ ಬಹಳ ಕಷ್ಟದ ಕೆಲಸ, ಸರಿಯಾಗಿ ನಡೆಸಬೇಕಾದರೆ ಜನರ ಸಹಾಯ ಬೇಕೆ ಬೇಕು. ಕಾನೂನು ಪ್ರಕ್ರಿಯೆಯಿಂದ ಅಧಿಕಾರ ನಡೆಸುವುದಕ್ಕೆ ಆಗುವುದಿಲ್ಲ. ಜನರ ಸಹಾಯ ಬಹಳ ಮುಖ್ಯ. ಜನಪರ ಮನೋಭಾವನೆ ಮುಖ್ಯ. ದೂರು ಕೊಟ್ಟ ನಂತರ ಶೇ.90ರಷ್ಟು ಕೇಸ್ಗಳಲ್ಲಿ ತನಿಖೆ ನಡೆಯುತ್ತದೆ. ಶೇ.10 ಕೇಸ್ಗಳು ಕೆಲವು ಕಾರಣಗಳಿಂದ ತನಿಖೆ ಆಗಲ್ಲ ಅದನ್ನು ನಾನು ಒಪ್ಪುತ್ತೇನೆ. ಕಮಲ್ ಪಂತ್ ಬಹಳ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಹಲಸೂರಿನ ನಿವಾಸಿ ಮೋಹನ್ ರಾಜ್ ಮಾತನಾಡಿ, ಹಲಸೂರು ಕೆರೆ ಸುತ್ತಮುತ್ತಲು ಡ್ರಗ್ಸ್ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಗುಂಗಿನಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬ ಸಮಸ್ಯೆಗೆ ಸ್ಪಂದಿಸಿದ ಆಯುಕ್ತರು ಸಂಬಂಧಪಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೂಚನೆ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಗಸ್ತು ಕಾಯುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ..!
ಇನ್ನು ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆಯುಕ್ತರು, ಸದ್ಯ ಸಂತೋಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರಿನನ್ವಯ ಸದಾಶಿವನಗರ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದಾರೆ ಎಂದರು.