ಕೆ ಆರ್ ಪುರ( ಬೆಂಗಳೂರು) : ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ನಗರದಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿದೆ. ಅದರಲ್ಲೂ ನಗರದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಕೆ ಆರ್ ಪುರದಲ್ಲಿ ಕುಡಿಯಲು ನೀರಿಲ್ಲದೆ ಸಾರ್ವಜನಿಕರು ಹೈರಾಣಾಗಿದ್ದಾರೆ.
ಕೆ ಆರ್ ಪುರ ಕ್ಷೇತ್ರ ವ್ಯಾಪ್ತಿಯ ಬಸವನಪುರ ವಾರ್ಡ್ನಲ್ಲಿ ಇಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಸುಮಾರು 41 ಕೋಟಿ ರೂ ವೆಚ್ಚದಲ್ಲಿ ಬಸವನಪುರ ವಾರ್ಡ್ ಒಂದರಲ್ಲೇ 9 ವಿವಿಧ ಭಾಗದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದರು.
ಈ ವೇಳೆ ಎಲ್ಲಾ ಕಡೆ ಬಡಾವಣೆಯ ನಿವಾಸಿಗಳು ಕುಡಿಯುವ ನೀರು ಮತ್ತು ಹದಗೆಟ್ಟ ರಸ್ತೆಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಲಕ್ಷ್ಮಿಪುರ ಬಡಾವಣೆಗೆ ಆಗಮಿಸಿದಂತೆ ಸಚಿವ ಭೈರತಿ ಬಸವರಾಜ್ ಅವರನ್ನು ಸುತ್ತುವರೆದ ಬಡಾವಣೆಯ ನಿವಾಸಿಗಳು ಕುಡಿಯುವ ನೀರಿಲ್ಲ, ದಿನಬಳಕೆಗೆ ನೀರಿಲ್ಲದೆ ಮೂರು ದಿನಗಳಿಗೊಮ್ಮೆ ಸ್ನಾನ ಮಾಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.
ಇಂಜಿನಿಯರ್ ಮೇಲೆ ಅಧಿಕಾರಿ ಕೆಂಡಾಮಂಡಲ: ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆ ಅಧಿಕಾರಿಗಳನ್ನು ಸಚಿವ ಭೈರತಿ ಬಸವರಾಜ್ ಪ್ರಶ್ನಿಸಿದ್ದಾರೆ. ಆಗ ಬಸವನಪುರ ವಾರ್ಡ್ ಇಂಜಿನಿಯರ್ ಕೇಶವ್ ಸಮಸ್ಯೆ ಬಗ್ಗೆ ಉತ್ತರಿಸದೇ ಈಗ ಬೇಡ ಸಾರ್, ಪರ್ಸ್ನಲ್ ಆಗಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಸುತ್ತಲೂ ಸಾರ್ವಜನಿಕರು ಇರುವ ವೇಳೆ ಅಧಿಕಾರಿ ಉತ್ತರಿಸಿದ ಪರಿ ನೋಡಿ ಸಚಿವ ಭೈರತಿ ಅವರು ಕೆಂಡಾಮಂಡಲರಾಗಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಏನೇ ಇರ್ಲಿ ಇಲ್ಲೇ ಹೇಳು. ಏನು ಪರ್ಸ್ನಲ್ ಆಗಿ ಮಾತಾಡೋದು ಎಂದು ಕಿಡಿಕಾರಿದರು.
ಜನರ ಮುಂದೆ ನಿಂತುಕೊಳ್ಳಲು ಮರ್ಯಾದೆ ಹೋಗುತ್ತಿದೆ: ಬೆಳಗಿನಿಂದ ಬಸವನಪುರ ವಾರ್ಡ್ ವ್ಯಾಪ್ತಿಯಲ್ಲಿ ಎಲ್ಲೂ ಹೋದರೂ ನೀರಿನ ಸಮಸ್ಯೆ ಕೇಳಿ ಬರ್ತಿದೆ. ವಾರ್ಡ್ನಲ್ಲಿ ಏನೂ ಮಾಡುತ್ತಿದ್ದಿರ...? ನನಗೆ ಅವರ ಮುಂದೆ ನಿಂತುಕೊಳ್ಳಲು ಮರ್ಯಾದೆ ಹೋಗುತ್ತಿದೆ. ಕಳೆದ 14 ವರ್ಷಗಳಿಂದ ಯಾವತ್ತು ನೀರಿಗಾಗಿ ಜನ ನನ್ನನ್ನು ಪ್ರಶ್ನೆ ಮಾಡಿಲ್ಲ. ನಾನು ಈಗ ಹೇಗೆ ಉತ್ತರ ಕೊಡಲಿ ಎಂದು ಪ್ರಶ್ನಿಸಿದರು.
ಸಚಿವ ಭೈರತಿ ಬಸವರಾಜ್ ಅವರಿಗೆ ಮುಜುಗರ: ಯಾಕೆ ನೀರಿನ ಸಮಸ್ಯೆ ಆಗಿದೆ. ಇನ್ನೂ ಪರಿಹರಿಸದೇ ಏನೂ ಮಾಡುತ್ತಿದ್ದಿರಾ. ಎರಡು ಮೂರು ದಿನಗಳಲ್ಲಿ ನೀರಿನ ಸಮಸ್ಯೆ ಸರಿಪಡಿಸದಿದ್ದರೆ ನಾನು ಸುಮ್ಮನಿರುವುದಿಲ್ಲ. ಒಂದು ವಾರದ ನಂತರ ಮತ್ತೆ ಈ ಭಾಗಕ್ಕೆ ಬಂದು ಪರಿಶೀಲನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆಯನ್ನು ಸಾರ್ವಜನಿಕರು ಎದುರಿಸುವಂತಾಗಿದೆ. ಸಮಸ್ಯೆ ಬಗ್ಗೆ ಪ್ರಶ್ನಿಸಿದರೇ ಸಚಿವರಿಗೆ ಸಾರ್ವಜನಿಕವಾಗಿ ಪರ್ಸ್ನಲ್ ಆಗಿ ಮಾತನಾಡುತ್ತೇನೆ ಎಂದು ಉತ್ತರಿಸಿದ್ದು, ಸಚಿವ ಭೈರತಿ ಬಸವರಾಜ್ ಅವರಿಗೆ ಮುಜುಗರ ತರಿಸಿದೆ.
ಓದಿ: ಕುಡಿಯುವ ನೀರಿಗಾಗಿ ಆಗ್ರಹ: ಮರಿಯಮ್ಮನಹಳ್ಳಿ ಪಟ್ಟಣ ಬಂದ್ ಮಾಡಿ ಬಿಸಿ ಮುಟ್ಟಿಸಿದ ಜನ